- ದಾವಣಗೆರೆ ಎಸಿ ಕಚೇರಿ ಬಳಿ ರಾಜ್ಯ ಸಂಚಾಲಕ ಮಲ್ಲೇಶ್ ನೇತೃತ್ವದಲ್ಲಿ ಧರಣಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಬೇಡಿಕೆ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಖಾತ್ರಿಪಡಿಸಿ ಪರಿಪೂರ್ಣ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ದಸಂಸ ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ಈ ಸಂದರ್ಭ ಮಾತನಾಡಿ, ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ 2024ರ ಆಗಸ್ಟ್ 1ರಂದು ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಆಧಾರಿಸಿ ರಾಜ್ಯ ಸರ್ಕಾರ ತನ್ನ ಪರಮಾಧಿಕಾರ ಚಲಾಯಿಸಿ ನೊಂದ ಸಮುದಾಯಗಳ ಅವಿಶ್ರಾಂತ ಸಂಘರ್ಷಕ್ಕೆ ವಿರಾಮ ನೀಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಒಳಮೀಸಲಾತಿ ವರ್ಗೀಕರಣಕ್ಕೆ ಅವಕಾಶ ವಂಚಿತ ಸಮುದಾಯಗಳು ಮತ್ತೊಮ್ಮೆ ಸಂಘರ್ಷಕ್ಕೆ ಮುಂದಾಗಲು ಸರ್ಕಾರವೇ ಅವಕಾಶ ಕಲ್ಪಿಸಿದಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ಆಶಯದಂತೆ ಹಿಂದುಳಿದಿರುವಿಕೆಯೇ ಒಳಮೀಸಲಾತಿ ಹಂಚಿಕೆಗೆ ಮಾನದಂಡವಾಗಿದೆ ಎಂದು ಹೇಳಿದರು.ಹಾಗಾಗಿಯೇ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಕೇವಲ 3 ತಿಂಗಳಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿಖರ ದತ್ತಾಂಶ ಸಂಗ್ರಹಿಸಿ, ಒಳಮೀಸಲಾತಿಗೆ ಅನುಮೋದನೆ ನೀಡಿವೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಸರ್ಕಾರ ಮಾತ್ರ ನಿಖರ ದತ್ತಾಂಶವನ್ನು ಗಂಭೀರವಾಗಿ ಪರಿಗಣಿಸದೇ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿ, ಶಿಕ್ಷಣ ಉದ್ಯೋಗ ನೇಮಕಾತಿ ಆಗದೇ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಎಲ್ಲ ಅಂಶಗಳನ್ನು ಸರಿಪಡಿಸಲು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸಿದರು.
- - -
- ಎಸ್‌ಸಿಪಿ, ಟಿಎಸ್‌ಪಿ, ಅನುದಾನ ಒಳ ಮೀಸಲಾತಿ ವರ್ಗೀಕರಣ 6:6:5ರ ಅನುಪಾತದಲ್ಲಿ ಹಂಚಿಕೆ ಆಗಬೇಕು.
- ಶಾಶ್ವತ ಆಯೋಗ ನೇಮಕ ಮತ್ತು ಮೀಸಲಾತಿ ಹೆಚ್ಚಳಕ್ಕೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು.
- ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಸುವರ್ಣ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಚಾಲನೆ ನೀಡಬೇಕು.
- - -
ದಾವಣಗೆರೆ ಎಸಿ ಕಚೇರಿ ಮುಂದೆ ಪರಿಶಿಷ್ಠ ಜಾತಿಯ ಒಳ ಮೀಸಲಾತಿಯನ್ನು ಖಾತ್ರಿ ಪಡಿಸಿ ಪರಿಪೂರ್ಣ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು.