ರೈತರು ಬೆಳೆ ಸಾಲ, ವಿಮೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಿ: ಕೆ.ಆರ್.ನಂದಿನಿ

KannadaprabhaNewsNetwork |  
Published : Sep 06, 2026, 02:15 AM IST
೪ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಎಲ್‌ಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಜಿಪಂ ಸಿಇಓ ಕೆ.ಆರ್.ನಂದಿನಿ ಮಾತನಾಡಿದರು. | Kannada Prabha

ಸಾರಾಂಶ

ಬೆಳೆ ಸಾಲ ಅಥವಾ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರು ಸಲ್ಲಿಸಿರುವ ಅರ್ಜಿಗಳಲ್ಲಿ ಯಾವುದೇ ಅರ್ಜಿ ತಾಂತ್ರಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ತಿರಸ್ಕೃತವಾಗಿದ್ದರೆ, ತಿರಸ್ಕಾರಕ್ಕೆ ನಿಖರ ಕಾರಣಗಳನ್ನು ಬ್ಯಾಂಕ್‌ವಾರು ಹಾಗೂ ಪ್ರಕರಣವಾರು ಪರಿಶೀಲಿಸಿ, ತಿರಸ್ಕಾರವು ನಿಯಮಾನುಸಾರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿರುವ ಅರ್ಹ ರೈತರು ಬೆಳೆ ಸಾಲ ಹಾಗೂ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗದಂತೆ ಬ್ಯಾಂಕುಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಎಲ್‌ಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಮಾಡಿರುವ ರೈತರ ಸಂಖ್ಯೆ, ಬೆಳೆ ಸಾಲ ಪಡೆದಿರುವವರ ಸಂಖ್ಯೆ ಹಾಗೂ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿರುವ ರೈತರ ಸಂಖ್ಯೆಯ ಕುರಿತು ತಾಲೂಕು ಹಾಗೂ ಬ್ಯಾಂಕ್‌ವಾರು ನಿಖರ ಅಂಕಿ-ಅಂಶಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.

ಬೆಳೆ ಸಾಲ ಅಥವಾ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರು ಸಲ್ಲಿಸಿರುವ ಅರ್ಜಿಗಳಲ್ಲಿ ಯಾವುದೇ ಅರ್ಜಿ ತಾಂತ್ರಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ತಿರಸ್ಕೃತವಾಗಿದ್ದರೆ, ತಿರಸ್ಕಾರಕ್ಕೆ ನಿಖರ ಕಾರಣಗಳನ್ನು ಬ್ಯಾಂಕ್‌ವಾರು ಹಾಗೂ ಪ್ರಕರಣವಾರು ಪರಿಶೀಲಿಸಿ, ತಿರಸ್ಕಾರವು ನಿಯಮಾನುಸಾರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಸಾಮಾನ್ಯ ಪರಿಸ್ಥಿತಿಗಿಂತ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದ್ದು, ಬ್ಯಾಂಕುಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೇವಲ ರೈತರು ಅರ್ಜಿ ಸಲ್ಲಿಸುವುದನ್ನು ಕಾಯದೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮತ್ತು ನೋಂದಣಿ ಅಭಿಯಾನಗಳನ್ನು ನಡೆಸಿ ಅರ್ಹ ರೈತರನ್ನು ಸ್ವಯಂಪ್ರೇರಿತವಾಗಿ ತಲುಪಬೇಕು ಎಂದರು.

ಇದೇ ವೇಳೆ ಪಿಎಂಎಫ್‌ಎಂಇ ಯೋಜನೆಯಡಿ ತಿರಸ್ಕೃತವಾಗಿರುವ ಅರ್ಜಿಗಳನ್ನು ಬ್ಯಾಂಕ್‌ವಾರು ಪರಿಶೀಲಿಸಿ, ತಿರಸ್ಕಾರದ ಕಾರಣಗಳನ್ನು ದಾಖಲಿಸಬೇಕು. ಅರ್ಹ ಪ್ರಕರಣಗಳಿದ್ದಲ್ಲಿ ಶೀಘ್ರವಾಗಿ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಪರಿಶೀಲನಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು.

ಪಿಎಂಜೆಜೆವೈ, ಪಿಎಂಎಸ್‌ಬಿವೈ ಹಾಗೂ ಎಪಿವೈ ಯೋಜನೆಗಳ ಪ್ರಗತಿಯನ್ನು ವಿಶೇಷವಾಗಿ ಪರಿಶೀಲಿಸುವಂತೆ ಸೂಚಿಸಿದ ಅವರು, ಪ್ರತಿ ಬ್ಯಾಂಕ್ ಹಾಗೂ ಇಲಾಖೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಮಾಸಿಕ ಪ್ರಗತಿ ದಾಖಲಿಸಬೇಕು. ಗ್ರಾಪಂ ಮತ್ತು ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರನ್ನು ಯೋಜನೆಗಳಿಗೆ ನೋಂದಾಯಿಸುವುದು. ಎಪಿವೈ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಲೀಡ್ ಬ್ಯಾಂಕ್ ವ್ಯಾನೇಜರ್, ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗೈರಿನ ಬಗ್ಗೆ ಸಿಇಒ ಅಸಮಾಧಾನ

ಸಭೆಗೆ ಗೈರುಹಾಜರಾದ ಬ್ಯಾಂಕುಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಸಭೆಗೆ ಹಾಜರಾಗದ ಬ್ಯಾಂಕುಗಳಿಗೆ ನೋಟಿಸ್ ನೀಡಿ ಕಾರಣ ಪಡೆಯುವುದರೊಂದಿಗೆ, ಮುಂದಿನ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೃಷಿ, ತೋಟಗಾರಿಕೆ ಸೇರಿದಂತೆ ಆದ್ಯತಾ ವಲಯದ ಸಾಲ, ಬೆಳೆ ಸಾಲ, ಬೆಳೆ ವಿಮೆ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಕೆಲಸಗಳಿಗೆ ಅಲೆದಾಟ ತಪ್ಪಲಿದೆ
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಗತಿ