ಸರ್ಕಾರವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು
ಬಳ್ಳಾರಿ: ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸುವ ಪರಿಕಲ್ಪನೆಯೊಂದಿಗೆ ಚಾಲನೆ ನೀಡಲಾಗಿರುವ ಪ್ರಜಾಸೇವಾ ಆಂದೋಲನ ಸಭೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಅಭಿಪ್ರಾಯಪಟ್ಟರು.
ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಾಸಕ ಬಿ.ನಾಗೇಂದ್ರ ಮಾತನಾಡಿ, ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆ ಪರಿಹರಿಸಿಕೊಳ್ಳಲು ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಗೆ ಅಲೆದಾಡುವ ಹಾಗೂ ತಮ್ಮ ಸರ್ಕಾರಿ ಕೆಲಸಗಳಿಗಾಗಿ ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳ ಬಳಿ ಪದೇ ಪದೇ ಅಲೆದಾಡುವ ಕಾಲ ಈಗ ಮುಗಿದಿದೆ. ಸರ್ಕಾರವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ನಿಗದಿತ ಕಾಲಮಿತಿಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು ಎನ್ನುವ ಸದುದ್ದೇಶದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಪ್ರಜಾಸೇವೆಗಾಗಿ ಪ್ರತ್ಯೇಕ ಇಲಾಖೆ ಹಾಗೂ ಸಚಿವಾಲಯ ಪ್ರಾರಂಭಿಸಿರುವ ಮುಖ್ಯಮಂತ್ರಿಗಳು, ಈ ಸಂಬಂಧ ಅಗತ್ಯ ಹುದ್ದೆಗಳನ್ನು ಕೂಡ ಭರ್ತಿ ಮಾಡಿ,ಇಂದಿನಿಂದಲೇ ಕಾರ್ಯರೂಪಕ್ಕೆ ತಂದಿದ್ದಾರೆ. ರಾಜ್ಯದ ಕಟ್ಟಕಡೆಯ ಗ್ರಾಮದಲ್ಲಿರುವ ಜನರಿಗೂ ಸರ್ಕಾರದ ಸೇವೆ ತಲುಪಬೇಕು ಎಂಬ ಉದ್ದೇಶದಿಂದ, ಜನರಿಗೆ ಉತ್ತಮ ಆಡಳಿತ ಕೊಡಲು ಪ್ರಜಾಸೇವಾ ಆಂದೋಲನದಂತಹ ಅದ್ಭುತ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ ಎಂದು ಬಣ್ಣಿಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಸಾರ್ವಜನಿಕರ ಯಾವುದೇ ಸಮಸ್ಯೆಗೆ ಕಾನೂನುಬದ್ಧವಾಗಿ ಪರಿಹಾರ ಕಲ್ಪಿಸಬೇಕು. ಕ್ರಮಬದ್ಧವಲ್ಲದ ಅಥವಾ ಕಾನೂನು ವ್ಯಾಪ್ತಿಗೆ ಬಾರದ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾಧ್ಯಮಗಳು ಸಹ ಸಹಕಾರ ನೀಡಬೇಕು. ಜನರ ಕುಂದುಕೊರತೆ ತಾತ್ವಿಕ ಅಂತ್ಯ ಕಾಣಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಪ್ರಜಾಸೇವಾ ಆಂದೋಲನ ಸಭೆಯ ರೂಪುರೇಷೆ ವಿವರಿಸಿ, ರಾಜ್ಯ ಸರ್ಕಾರದ ಆಶಯದಂತೆ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮಗಳ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಆಲಿಸಿ, ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚಿಸಿದರು.ಪ್ರತಿ ತಿಂಗಳ ಮೊದಲ ಮತ್ತು ಮೂರನೆ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಎರಡನೆ ಮತ್ತು ನಾಲ್ಕನೆ ಶನಿವಾರ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಆಯಾ ಶಾಸಕರುಗಳ ನೇತೃತ್ವದಲ್ಲಿ ಪ್ರಜಾಸೇವಾ ಸಭೆ ನಡೆಯಲಿದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು ಪ್ರತಿ ಸೋಮವಾರ ಅಹವಾಲುಗಳ ಕುರಿತು ಮಾಹಿತಿ ಪಡೆದು, ಮಂಗಳವಾರ ಅವುಗಳ ಪರಿಶೀಲನೆ ನಡೆಸುವರು. ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಪ್ರಜಾಸೇವಾ ಸಭೆ ನಡೆಸುವ ಸ್ಥಳ ಹಾಗೂ ವೇಳಾಪಟ್ಟಿ ಪ್ರಚುರಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಉಪ ಮೇಯರ್ ಮುಬೀನ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್, ಎಡಿಸಿ ಮಹಮ್ಮದ್ ಜುಬೇರ್, ಉಪವಿಭಾಗಾಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಸಂಘಟನೆಗಳು, ಸಾರ್ವಜನಿಕರು ಸಲ್ಲಿಸಿದ ಅಹವಾಲು ವೇದಿಕೆಯಲ್ಲಿಯೇ ಸ್ವೀಕರಿಸಿದ ಶಾಸಕರುಗಳಾದ ಬಿ. ನಾಗೇಂದ್ರ ಹಾಗೂ ನಾರಾ ಭರತ್ ರೆಡ್ಡಿಯವರು, ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
2 ತಾಸು ತಡವಾಗಿ ಬಂದ ಶಾಸಕರುಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಶಾಸಕರಾದ ಬಿ.ನಾಗೇಂದ್ರ ಹಾಗೂ ನಾರಾ ಭರತ್ ರೆಡ್ಡಿ ರಡು ತಾಸು ತಡವಾಗಿ ಆಗಮಿಸಿದರು. ಬೆಳಗ್ಗೆ 10.30ಕ್ಕೆ ಶುರುಗೊಳ್ಳಬೇಕಿದ್ದ ಸಮಾರಂಭ ಎರಡು ತಾಸಿನ ಬಳಿಕ ಚಾಲನೆ ದೊರೆಯಿತು. ಅಲ್ಲಿವರೆಗೆ ಹಿರಿಯ ಅಧಿಕಾರಿಗಳು ಶಾಸಕರ ಬರುವಿಕೆಗಾಗಿ ಕಾದು ಕುಳಿತಿದ್ದರು.