ಕಾರವಾರ: ನಗರಸಭೆಯಿಂದ ಸಾರ್ವಜನಿಕರಿಗೆ ಒದಗಿಸುವ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ತ್ವರಿತಗತಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಿ, ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.
ನಾಗರಿಕರಿಗೆ ಪ್ರತಿದಿನ ಒದಗಿಸಬೇಕಾದ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಗರಸಭಾ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುರಿತಂತೆ ಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹಣೆಯಲ್ಲಿ ನಿಗದಿತ ಗುರಿ ಸಾಧನೆಯಾಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದುವರೆಗಿನ ತೆರಿಗೆ ಮತ್ತು ಬಾಕಿ ತೆರಿಗೆ ಪಾವತಿ ಮಾಡಬೇಕಿರುವವರ ಪಟ್ಟಿ ಮಾಡಿ, ಅವರಿಗೆ ನೋಟಿಸ್ ನೀಡಿ, ಅವರಿಂದ ಸಂಪೂರ್ಣ ತೆರಿಗೆಯನ್ನು ವಸೂಲಿ ಮಾಡುವಂತೆ ನಿರ್ದೇಶನ ನೀಡಿದರು.
ನಗರಸಭೆಯ ವಿವಿಧ ಯೋಜನೆಗಳಲ್ಲಿನ ಪ್ರಗತಿ ಕುರಿತಂತೆ ಪರಿಶೀಲಿಸಿ, ಎಲ್ಲ ಯೋಜನೆಗಳಲ್ಲಿ ಸಂಪೂರ್ಣ ಗುರಿ ಸಾಧಿಸಬೇಕು ಎಂದರು.ನಗರಸಭೆ ಪ್ರಭಾರ ಪೌರಾಯುಕ್ತ ಕೆ.ಎಂ. ರವಿಕುಮಾರ ಹಾಗೂ ಅಧಿಕಾರಿಗಳು ಇದ್ದರು.