
ಮಡಿಕೇರಿ : ಕೊಡಗು ಜಿ.ಪಂ.ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಕೊಡಗು ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಒ ಸೋಮಶೇಖರ್ ಎಸ್.ಜೆ ಅವರ ನೇತೃತ್ವದಲ್ಲಿ ಮಂಗಳವಾರ ಜರುಗಿತು.
ವಿಬಿ ಜಿ ರಾಮ್ ಜಿ ಯೋಜನೆಯ ಪ್ರಗತಿ ಸಂಬಂಧಿಸಿದಂತೆ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆಯಿದ್ದು, ಅದರ ಅನುಸಾರವಾಗಿ ಜನರಿಗೆ ಯೋಜನೆಯ ಸೌಲಭ್ಯ ಒದಗಿಸಿಕೊಡುವಲ್ಲಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕಿ ಹಳ್ಳಿಗಳಿಂದ ಕಸವನ್ನು ತಂದು ನಗರ ಪ್ರದೇಶಕ್ಕೆ ಬಿಸಾಡುತ್ತಿದ್ದಾರೆ, ಅಂತಹ ಪ್ರಕರಣಗಳು ಕಂಡುಬಂದರೆ ದಂಡ ಹಾಕಿ ಎಚ್ಚರಿಕೆ ನೀಡಲು ಸಲಹೆ ನೀಡಿದರು.ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಪ್ರತಿ ಗ್ರಾ.ಪಂ.ಗಳಲ್ಲಿ ಕೈಗೊಂಡು ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇದೇ ಸಂದರ್ಭದಲ್ಲಿ ತಿಳಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಭಾರತ್ ಜೋಡೊ ಯುವ ಸಂಘಗಳ ನೋಂದಣಿಯನ್ನು ಕೈಗೊಳ್ಳುವುದರಿಂದ ಪ್ರತಿ ಸಂಘಕ್ಕೆ 10 ಲಕ್ಷ ರು. ಸಹಾಯಧನ ನೀಡಲಾಗುತಿದ್ದು ಯುವ ಶಕ್ತಿಯನ್ನು ಬಲಪಡಿಸಲು ಯೋಜನೆಯು ಸಹಕಾರಿಯಾಗಿದೆ ಎಂದು ನುಡಿದರು.ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬೀ ಅವರು ಮಾತನಾಡಿ ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಹಾಗೂ ನಿಯಮಿತವಾಗಿ ಅಡಾಕ್ ಸಭೆಗಳನ್ನು ನಡೆಸಿ ತಿರುವಳಿಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥಪಡಿಸಿ ಪ್ರಗತಿ ಸಾಧಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಯೋಜನಾ ನಿರ್ದೇಶಕರಾದ ಜೀವನ್ ಕುಮಾರ್, ತಾ.ಪಂ.ಇ.ಒ ಶೇಖರ್, ಸೋಮವಾರಪೇಟೆ ಇ.ಒ.ಪರಮೇಶ್ವರ್, ವಿರಾಜಪೇಟೆ ಇ.ಒ.ರಾಜೇಶ ಕೆ.ಆರ್, ಮಡಿಕೇರಿ ತಾ.ಪಂ.ಸಹಾಯಕ ನಿರ್ದೇಶಕರು (ಗ್ರಾ.ಉ) ಹೇಮಂತ್, ಸೋಮವಾರಪೇಟೆ ಸಹಾಯಕ ನಿರ್ದೇಶಕ(ಪಂ.ರಾಜ್) ಶ್ರೀನಿವಾಸ್, ಜಲಜೀವನ್ ಅಭಿಯಾನದ ಎಂಜಿನಿಯರ್ ಭಾಸ್ಕರ, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿಬಿ ಜಿ ರಾಮ್ ಜಿ ತಾಂತ್ರಿಕ ಸಿಬ್ಬಂದಿ ಹಾಗೂ ಜಿ.ಪಂ.ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.