ಹೂವಿನಹಡಗಲಿ: ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ವಿದ್ಯಾರ್ಥಿ ದೆಸೆಯಲ್ಲಿ ನಾನು ಕೂಡ ತೀರಾ ಬಡ ಕುಟುಂಬದಲ್ಲಿ ಬೆಳೆದಿದ್ದೇನೆ. ನನ್ನ ತಾಯಿ ಹಾಲು ಮಾರಿ ನನಗೆ ಶಿಕ್ಷಣ ಕೊಡಿಸಿದ್ದರು. ಅನೇಕ ಕುಟುಂಬದಲ್ಲಿ ಇಂದಿಗೂ ಬಡತನವಿದ್ದರೂ ನಿಮ್ಮ ತಂದೆ ತಾಯಿ ಕಷ್ಟಪಟ್ಟು, ನಿಮಗೆ ಶಿಕ್ಷಣ ಕೊಡಿಸುತ್ತಿದ್ದಾರೆ, ಆದರಿಂದ ಉತ್ತಮವಾಗಿ ಎಲ್ಲರೂ ಅಭ್ಯಾಸ ಮಾಡಬೇಕೆಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಿಗೂ ಕೂಡ ಅನೇಕ ಸಂದರ್ಭದಲ್ಲಿ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿದ್ದರೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನಮ್ಮ ತಾಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಆಯಾ ಕೋರ್ಸಗಳಿಗೆ ಅನುಗುಣವಾಗಿ ನಲವತ್ತು ಸಾವಿರದಿಂದ ಐವತ್ತು ಸಾವಿರವರೆಗೆ ಶಿಷ್ಯ ವೇತನ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಕಲ್ಯಾಣ ಕರ್ನಾಟಕ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ್ ಮಾತನಾಡಿ, ಈ ಒಂದು ಸುಜ್ಞಾನ ನಿಧಿ ಶಿಷ್ಯವೇತನ ನೀಡುವ ಉದ್ದೇಶ ಬಡ ಕುಟುಂಬ ಅಭಿವೃದ್ಧಿ ಪಡಿಸುವ ಉದ್ದೇಶವೇ ಆಗಿದೆ. ಮುಂದಿನ ಜೀವನದ ಆಶಾ ಭಾವನೆಗಳಿಗೆ ಸಂಬಂಧಿಸಿದಂತೆ, ಸ್ವಸಹಾಯ ಸಂಘದ ಸದಸ್ಯರು ತಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಸಾಲ ಪಡೆದುಕೊಂಡು ಸಮಸ್ಯೆ ಮಾಡಿಕೊಳ್ಳಬಾರದೆಂದು ಹೇಳಿದರು.
ಈ ಕಾರ್ಯಕ್ರಮದ ಫಲಾನುಭವಿ ವಿದ್ಯಾರ್ಥಿಗಳು ತಾವು ಪಡೆದುಕೊಂಡ ಶಿಷ್ಯ ವೇತನದ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ತಂದೆ ತಾಯಿಗಳಿಗೆ ಒಳ್ಳೆಯ ಹೆಸರನ್ನು ತೆಗೆದುಕೊಂಡು ಬರುವುದು, ಅವರ ಜವಾಬ್ದಾರಿ ಆಗಿದೆ ಎಂದು ಹೇಳಿದರು.