ಅರ್ಹರು ಮತದಾರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಿ

KannadaprabhaNewsNetwork |  
Published : Jul 01, 2026, 01:45 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಪ್ರಜಾಪ್ರಭುತ್ವದ ಬಲವಾದ ಅಡಿಪಾಯವೇ ಮತದಾನ. ಮತದಾನದ ಹಕ್ಕು ಸುರಕ್ಷಿತವಾಗಿರಬೇಕಾದರೆ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರ ಮಾಹಿತಿಯೂ ನಿಖರವಾಗಿರಬೇಕು. ಹೀಗಾಗಿ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ನೀಡಿ ಅಗತ್ಯ ಮಾಹಿತಿಯನ್ನು ಪಡೆದು ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೈಯಲ್ಲಿ ಒಂದು ಕುಟುಂಬದ ಭವಿಷ್ಯ ಅಡಗಿದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಎಸ್‌ಐಆರ್ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು, ಬಿಎಲ್‌ಒ- 2ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಜುಲೈ 29ರವರೆಗೆ ನಡೆಯುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರತಿಯೊಂದು ಕುಟುಂಬದ ಸದಸ್ಯರನ್ನು ಭೇಟಿ ಮಾಡಬೇಕು. ಅರ್ಹ ಮತದಾರರ ಹೆಸರನ್ನು ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಪ್ರಜಾಪ್ರಭುತ್ವದ ಬಲವಾದ ಅಡಿಪಾಯವೇ ಮತದಾನ. ಮತದಾನದ ಹಕ್ಕು ಸುರಕ್ಷಿತವಾಗಿರಬೇಕಾದರೆ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರ ಮಾಹಿತಿಯೂ ನಿಖರವಾಗಿರಬೇಕು. ಹೀಗಾಗಿ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ನೀಡಿ ಅಗತ್ಯ ಮಾಹಿತಿಯನ್ನು ಪಡೆದು ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು.

ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಬೇಕು. ಹೊಸ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಸರು, ವಿಳಾಸ ಅಥವಾ ಇತರ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಕೂಡಲೇ ಅರ್ಜಿ ಸಲ್ಲಿಸಬೇಕು. ಮೃತಪಟ್ಟವರು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರನ್ನು ನಿಯಮಾನುಸಾರ ತೆಗೆದುಹಾಕಲು ಕುಟುಂಬ ಸದಸ್ಯರಿಂದ ಮಾಹಿತಿ ಹಾಗೂ ಸಹಿ ಪಡೆದುಕೊಳ್ಳಬೇಕು ಎಂದರು.

ಯಾವುದೇ ಮಾಹಿತಿ ಅಥವಾ ನಿಯಮಗಳ ಕುರಿತು ಸಂದೇಹವಿದ್ದರೆ ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿ ಅಥವಾ ಚುನಾವಣಾ ಇಲಾಖೆಯ ಅಧಿಕೃತ ವ್ಯವಸ್ಥೆಯ ಮೂಲಕ ಮಾಹಿತಿ ಪಡೆದು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಗ್ರಾಪಂಗಳಲ್ಲಿಯೂ ಈ ಕಾರ್ಯಕ್ಕಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಿ ಎಸ್‌ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಚೇತನ ಯಾದವ್, ತಾಪಂ ಇಒ ಚಂದ್ರು, ಸಿಡಿಪಿಒ ಕಮಲೇಶ್ವರ್, ಮುಖ್ಯಾಧಿಕಾರಿ ರಾಜಣ್ಣ, ತಾಪಂ ನೋಡಲ್ ಅಧಿಕಾರಿ ತ್ರಿವೇಣಿ, ಮತದಾರರ ಪಟ್ಟಿಯ ತರಬೇತುದಾರರಾದ ಮಮತಾ ಸೇರಿದಂತೆ ಕಂದಾಯ, ಕೃಷಿ, ಗ್ರಾಪಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕ ಪರೀಕ್ಷೆಗೆ ಪಿಯುಸಿಯಿಂದಲೇ ಅಣಿಯಾಗಿ
ಪಾವಗಡದಲ್ಲಿ ಕಾಯಂ ಶಿಕ್ಷಕರ ಕೊರತೆ