ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ

KannadaprabhaNewsNetwork |  
Published : May 31, 2025, 12:03 AM IST
ಪೋಟೊ30ಕೆಎಸಟಿ2: ಕುಷ್ಟಗಿ ಪಟ್ಟಣದ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಅಂಗನವಾಡಿ ಕಟ್ಟಡಗಳಿಗೆ ಜಾಗ ದೊರಕದೆ ಇದ್ದಲ್ಲಿ ಸರ್ಕಾರಿ ಶಾಲೆಯಲ್ಲಿ ಪಡೆದುಕೊಳ್ಳಲು ಆದೇಶ ಇರುತ್ತದೆ. ಸ್ಥಳ ಪರೀಶಿಲನೆ ಮಾಡುವ ಮೂಲಕ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಬೇಕು

ಕುಷ್ಟಗಿ: ಮುಂಗಾರು ಹಂಗಾಮಿನ ಬಿತ್ತನೆ ಸಮಯದಲ್ಲಿ ರೈತರಿಗೆ ಕಳಪೆ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವದು ಹಾಗೂ ಹೆಚ್ಚಿನ ದರ ವಸೂಲಿ ಮಾಡುತ್ತಿರುವದು ಕಂಡು ಬಂದಲ್ಲಿ ಅಂಗಡಿಕಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಇರುವ ರಸಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೆ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು, ಸರ್ಕಾರದಿಂದ ಬಂದಿರುವ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಅಂಗನವಾಡಿ ಕಟ್ಟಡಗಳಿಗೆ ಜಾಗ ದೊರಕದೆ ಇದ್ದಲ್ಲಿ ಸರ್ಕಾರಿ ಶಾಲೆಯಲ್ಲಿ ಪಡೆದುಕೊಳ್ಳಲು ಆದೇಶ ಇರುತ್ತದೆ. ಸ್ಥಳ ಪರೀಶಿಲನೆ ಮಾಡುವ ಮೂಲಕ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಬೇಕು ಇದಕ್ಕೆ ಶಿಕ್ಷಣ ಇಲಾಖೆ ಸಹಕಾರ ನೀಡಬೇಕು ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಹಾಗೂ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ದಾವಲಸಾಬ್‌ ವಾಲಿಕಾರಗೆ ಸೂಚಿಸಿದರು. ತಾಲೂಕಿನಲ್ಲಿ ಬಾಕಿ ಇರುವ ಸರ್ಕಾರಿ ಕಟ್ಟಡಗಳನ್ನು ಪೂರ್ಣಗೊಳಿಸಬೇಕು ಎಂದು ಪಂಚಾಯತ್ ರಾಜ್ ಉಪವಿಭಾಗದ ಎಇಇ ಧರಣೇಂದ್ರ ಅವರಿಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಾಸ್ಟೇಲ್ ಸ್ವಚ್ಚತೆಯ ಬಗ್ಗೆ ಗಮನ ಕೊಡಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಇರಬೇಕು. ಸೌಲಭ್ಯಗಳ ಕೊರತೆಯಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ಆರ್ಡಬ್ಲ್ಯೂಎಸ್ ಅಧಿಕಾರಿಗಳು ಜೆಜೆಎಂ ಕಾಮಗಾರಿಯಲ್ಲಿ ಅನೇಕ ತಪ್ಪು ಮಾಡುತ್ತಿದ್ದು, ತಾಲೂಕಿನಲ್ಲಿ ಸುಮಾರು 14 ಹಳ್ಳಿಗಳಿಗೆ ನೀರು ಹೋಗುತ್ತಿಲ್ಲ ಗಂಭೀರವಾಗಿ ಪರಿಗಣಿಸುವ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಎಲ್ಲ ಅಂಗನವಾಡಿ, ಶಾಲೆ ಹಾಗೂ ಆರೋಗ್ಯ ಕೇಂದ್ರಗಳಿಗೆ ನೀರಿನ ಸರಬರಾಜು ಮಾಡಬೇಕು ಎಂದರು.

ಟಿಎಚ್ಒ ಡಾ. ಆನಂದ ಗೋಟೂರ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚುತ್ತಿರಬಹುದು, ಆದರೆ ಇದು ಮೊದಲ ಕೊರೋನಾದಷ್ಟು ಪರಿಣಾಮಕಾರಿಯಲ್ಲ, ಕೋವಿಡ್ ಬಗ್ಗೆ ಯಾರು ಹೆದರುವ ಅವಶ್ಯಕತೆಯಿಲ್ಲ ನಾವು ಮುಂಜಾಗೃತೆಯಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದೇವೆ ಇದು ವಯಸ್ಸಾದವರಿಗೆ ಹಾಗೂ ಚಿಕ್ಕಮಕ್ಕಳಿಗೆ ಲಕ್ಷಣಗಳು ಕಂಡು ಬರುತ್ತಿದ್ದು ಸಾಮಾನ್ಯ ಚಿಕಿತ್ಸೆ ಪಡೆದುಕೊಂಡರೆ ಮೂರ್ನಾಲ್ಕು ದಿನಗಳಲ್ಲಿ ಹುಷಾರಾಗುತ್ತಾರೆ ಎಂದರು.

ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಜೆಜೆಎಂ ಕಾಮಗಾರಿಯ ನಾಲ್ಕೈದು ಗ್ರಾಮಗಳಲ್ಲಿ ಪೈಪ್‌ ಡ್ಯಾಮೇಜಾಗಿದ್ದು, ಈ ಕುರಿತು ಕ್ರಮ ಕೈಗೊಂಡಿಲ್ಲ ಯಾಕೆ ಆದಷ್ಟು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದರು.

ಇದೆ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿಯ ವರದಿ ತಿಳಿಸಿದರು.

84 ಮಕ್ಕಳಲ್ಲಿ ಅಪೌಷ್ಟಿಕತೆ

ಕುಷ್ಟಗಿ ತಾಲೂಕಿನಲ್ಲಿ ಸುಮಾರು 84ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುರಿತು ವರದಿ ಇದ್ದು, (ಸ್ಯಾಮ್) ಸಿಡಿಪಿಒ ಇಲಾಖೆ ಹಾಗೂ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ನಿಯಂತ್ರಣಕ್ಕೆ ತರಬೇಕು ಎಂದು ಖಡಕ್ ಸೂಚನೆ ಕೊಟ್ಟರು.

ಕರ್ತವ್ಯ ಲೋಪದ ಆರೋಪ

ಸಾರಿಗೆಯ ಬಸ್ಸುಗಳಲ್ಲಿ ಕಂಡಕ್ಟರ ಅವರು ಮಹಿಳೆಯರ ಉಚಿತ ಟಿಕೆಟನ್ನು ಪುರುಷರಿಗೆ ಕೊಡುವ ಮೂಲಕ ಯೋಜನೆಯ ಹಾದಿ ತಪ್ಪಿಸುವದಲ್ಲದೆ ಕರ್ತವ್ಯಲೋಪ ಮಾಡುತ್ತಿರುದು ಕಂಡು ಬಂದಿದೆ ಈ ಕುರಿತು ಎಲ್ಲರಿಗೂ ತಿಳಿಸಬೇಕು ಎಂದು ಡಿಪೋ ಮ್ಯಾನೇಜರ ಸುಂದರಗೌಡ ಅವರಿಗೆ ಸೂಚಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ