ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಖಡಕ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಖಡಕ್ ಸೂಚನೆ ನೀಡಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮೂರನೇ ತ್ರೈಮಾಸಿಕ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಡಿಒಗಳು ಪ್ರತಿದಿನ ಬೆಳಗ್ಗೆ 7 ಗಂಟೆಗೆ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕುಡಿಯುವ ನೀರಿನ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಪರಿಹಾರ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ್ದು ಕಂಡುಬಂದರೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸರ್ಕಾರಿ ಹಾಗೂ ಖಾಸಗಿ ಸೋಲಾರ್ ಸಿ.ಎಸ್.ಆರ್. ನಿಧಿಯನ್ನು ಯಾವುದೇ ಕಾರಣಕ್ಕೂ ಬೇರೆ ತಾಲೂಕು ಅಥವಾ ಜಿಲ್ಲೆಗೆ ವರ್ಗಾಯಿಸಬಾರದು. ಈ ಹಣವನ್ನು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬಳಸಬೇಕು. ತಮ್ಮ ಗಮನಕ್ಕೆ ತರದೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ತಾಲೂಕು ಕೆ.ಎಸ್.ಪಿ.ಡಿ.ಎಸ್.ಎಲ್ ಎಂಜಿನಿಯರ್ ಮಹೇಶ್ ಅವರಿಗೆ ತಾಕೀತು ಮಾಡಿ, ನಿಯಮ ಉಲ್ಲಂಘನೆ ಮಾಡಿದರೆ ವರ್ಗಾವಣೆ ಮಾಡಲಾಗುವುದು ಎಂದರು. ಕುಮುಟಾ–ಕೊಡಮಡುಗು ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಇಂಜಿನಿಯರ್ ಚೇತನ್ ಅವರಿಗೆ ನಿರ್ದೇಶನ ನೀಡಿದರು. ಎತ್ತಿನಹೊಳೆ ಪೈಪ್‌ಲೈನ್ ಕಾಮಗಾರಿಯ ಪ್ರಗತಿ ಕುರಿತು ಎ.ಇ.ಇ. ಮುರಳಿ ಅವರಿಂದ ಮಾಹಿತಿ ಪಡೆದ ಅವರು, ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಕುರಿತು ಇಂಜಿನಿಯರ್ ಬಸವಲಿಂಗಪ್ಪ ಅವರೊಂದಿಗೆ ಚರ್ಚಿಸಿ, ಜನರಿಗೆ ಶುದ್ಧ ಕುಡಿಯುವ ನೀರನ್ನು ಸಮಗ್ರವಾಗಿ ತಲುಪಿಸುವಂತೆ ಹಾಗೂ ಅದರ ಬಳಕೆಯ ಕುರಿತು ಜಾಗೃತಿ ಮೂಡಿಸುವಂತೆ ತಿಳಿದರು.ಇದಲ್ಲದೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ತಕ್ಷಣ ಹಸ್ತಾಂತರಿಸುವಂತೆ ಭೂಸೇನಾ ಎಇಇ ಸಿಂಧೂ ಅವರಿಗೆ ಸೂಚಿಸಿದರು.ಸಭೆಯಲ್ಲಿ ಕೃಷಿ, ತೋಟಗಾರಿಕೆ, ಬೆಸ್ಕಾಂ, ಶಿಕ್ಷಣ, ಆರೋಗ್ಯ ಇಲಾಖೆ, ಭೂ ಸೇನಾ ಇಲಾಖೆ, ನಿರ್ಮಿತಿ ಕೇಂದ್ರ, ಆಹಾರ ಇಲಾಖೆ, ಅರಣ್ಯ ಇಲಾಖೆ, ಅಕ್ಷರದಾಸೋಹ, ಬಿಸಿಎಂ. ಪಶುಸಂಗೋಪನೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ, ರೇಷ್ಮೆ ಇಲಾಖೆ, ಬೆಸ್ಕಾಂ, ಎಸ್ ಟಿ. ಇಲಾಖೆ, ಸಿಡಿಪಿಒ.ಕಾರ್ಮಿಕ, ಪುರಸಭೆ, ಎಪಿಎಂಸಿ.ಕೆಎಸ್ ಆರ್‌ಟಿ. ಸಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಎನ್ ಆರ್ ಎಂ. ಎಲ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಈ ವೇಳೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಎಸ್. ಪಾಪಣ್ಣ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಈಶ್ವರಪ್ಪ, ತಹಸೀಲ್ದಾರ್ ವೈ. ರವಿ, ತಾಪಂ ಇಒ ಮಧುಸೂದನ್, ತಾಪಂ ಎಡಿ ಮಾರುತಿ ಪ್ರಸಾದ್,ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.