ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ವೀರಭದ್ರಪ್ಪ ಬಿ.ಎಚ್.

KannadaprabhaNewsNetwork | Published : Apr 30, 2025 12:36 AM

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಮುಸುಕಿನ ಜೋಳ, ಸೊಯಾವರೆ, ಶೇಂಗಾ, ಕಬ್ಬು ಹಾಗೂ ಭತ್ತ ಪ್ರಮುಖ ಬೆಳೆಗಳಾಗಿವೆ. ಈ ಹಿನ್ನೆಲೆ ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ನಿರ್ವಹಿಸಬೇಕು.

ಹಾವೇರಿ: ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ಪೂರೈಸಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಕೃಷಿ ಪರಿಕರ ಮಾರಾಟಗಾರರಿಗೆ ಸಲಹೆ ನೀಡಿದರು.ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವ ಸಲುವಾಗಿ ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರ ಸಭೆ ನಡೆಸಿ ಮಾತನಾಡಿದರು.ಪ್ರಸ್ತುತ ಮುಂಗಾರಿನಲ್ಲಿ ತಾಲೂಕಿನಲ್ಲಿ ಈವರೆಗೆ 51.2 ಮಿಮೀ ಮಳೆಯಾಗಿದೆ. ರೈತರು ಭೂಮಿ ಸಿದ್ಧತೆ ಕಾರ್ಯ ನಡೆಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಮುಸುಕಿನ ಜೋಳ, ಸೊಯಾವರೆ, ಶೇಂಗಾ, ಕಬ್ಬು ಹಾಗೂ ಭತ್ತ ಪ್ರಮುಖ ಬೆಳೆಗಳಾಗಿವೆ. ಈ ಹಿನ್ನೆಲೆ ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ನಿರ್ವಹಿಸಬೇಕೆಂದು ಸೂಚನೆ ನೀಡಿದರು.ಜಿಲ್ಲೆಯ ವಿಚಕ್ಷಣಾ ದಳದ ಸಹಾಯಕ ಕೃಷಿ ನಿರ್ದೇಶಕ ಶಿವಲಿಂಗಪ್ಪ ವಿ.ಕೆ. ಮಾತನಾಡಿ, ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ದಾಸ್ತಾನು ಹಾಗೂ ದರಪಟ್ಟಿಯನ್ನು ಪ್ರದರ್ಶಿಸಬೇಕು. ರೈತರಿಗೆ ರಶೀದಿಯನ್ನು ನೀಡುವುದು ಹಾಗೂ ಇನ್ನಿತರ ದಾಖಲಾತಿಗಳನ್ನು ನಿರ್ವಹಿಸುವ ಕುರಿತು ಮಾರಾಟಗಾರರಿಗೆ ಸೂಚನೆಗಳನ್ನು ನೀಡಿದರು. ರಸಗೊಬ್ಬರ ಹಾಗೂ ಹಂಗಾಮಿನಲ್ಲಿ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನಿರ್ವಹಿಸಲು ತಿಳಿಸಿದರು.ಈ ವೇಳೆ ಇನ್ನೋರ್ವ ವಿಚಕ್ಷಣಾ ದಳದ ಸಹಾಯಕ ಕೃಷಿ ನಿರ್ದೇಶಕ ಬಿ.ವಿ. ಶ್ರೀನಿವಾಸಲು ಅವರು ರಸಗೊಬ್ಬರ ನಿಯಂತ್ರಣ ಕಾಯಿದೆ, ಬೀಜ ಮತ್ತು ಕೀಟನಾಶಕ ಕಾಯಿದೆಗಳ ಬಗ್ಗೆ ಉಪನ್ಯಾಸ ನೀಡಿದರು. ಸಮಗ್ರ ರಸಗೊಬ್ಬರ ಬಳಕೆ ಕುರಿತು ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಹಾವೇರಿ ತಾಲೂಕು ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್. ಕಾಮಣ್ಣವರ, ಉಪಾಧ್ಯಕ್ಷ ರುದ್ರಪ್ಪ ಹಾದಿಮನಿ, ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ರುದ್ರಪ್ಪ ಜಾಲಿ, ತಾಲೂಕು ತಾಂತ್ರಿಕ ಅಧಿಕಾರಿ ಧನಂಜಯ ನಾಗಣ್ಣನವರ, ತಾಲೂಕಿನ ಪರವಾನಗಿ ಹೊಂದಿದ ವಿವಿಧ ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ರಸಗೊಬ್ಬರ ಪೂರೈಕೆ: ಹಾವೇರಿ ತಾಲೂಕಿನ ರೈತರು ಅಧಿಕೃತ ಪರವಾನಗಿ ಹೊಂದಿದ ಮಾರಾಟಗಾರರಿಂದ ಮಾತ್ರ ರಸಗೊಬ್ಬರ ಖರೀದಿಸಬೇಕು. ತಮ್ಮ ಆಧಾರ ಸಂಖ್ಯೆಯನ್ನು ನಮೂದಿಸಬೇಕು. ರೈತರು ಕೇವಲ ಒಂದೇ ಬಗೆಯ ಗೊಬ್ಬರಕ್ಕೆ ಅವಲಂಬಿತರಾಗದೇ ಗಂಧಕ ಹಾಗೂ ಪೋಟ್ಯಾಷ್ ಅಂಶಗಳಿರುವ ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಾಧ್ಯವಾಗಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

Share this article