ಬಿತ್ತನೆ ಬೀಜ, ರಸಗೊಬ್ಬರದ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಿ-ಶಾಸಕ ಲಮಾಣಿ

KannadaprabhaNewsNetwork |  
Published : Apr 14, 2026, 02:15 AM IST
ಹಾವೇರಿ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. | Kannada Prabha

ಸಾರಾಂಶ

ಇನ್ನೇನು ಮುಂಗಾರು ಹಂಗಾಮು ಆರಂಭವಾಗಲಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಆಗದಂತೆ ನೋಡಿಕೊಳ್ಳಬೇಕು. ನೆಪ ಹೇಳದೆ ತಾಲೂಕಿನಲ್ಲಿರುವ 35 ಸೊಸೈಟಿಗಳಿಗೆ ಆದ್ಯತೆ ಮೇರೆಗೆ ರಸಗೊಬ್ಬರ ಪೂರೈಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಾವೇರಿ: ಇನ್ನೇನು ಮುಂಗಾರು ಹಂಗಾಮು ಆರಂಭವಾಗಲಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಆಗದಂತೆ ನೋಡಿಕೊಳ್ಳಬೇಕು. ನೆಪ ಹೇಳದೆ ತಾಲೂಕಿನಲ್ಲಿರುವ 35 ಸೊಸೈಟಿಗಳಿಗೆ ಆದ್ಯತೆ ಮೇರೆಗೆ ರಸಗೊಬ್ಬರ ಪೂರೈಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಬೇಡಿಕೆಗಿಂತಲೂ ಹೆಚ್ಚುವರಿ ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಮಾತನಾಡಿ, ತಾಲೂಕಿನಲ್ಲಿ 20,471 ಮೆಟ್ರಿಕ್ ಟನ್ ಗೊಬ್ಬರಕ್ಕೆ ಬೇಡಿಕೆ ಇದೆ. ಕಾಂಪ್ಲೆಕ್ಸ್ ಗೊಬ್ಬರದ ಸಮಸ್ಯೆ ಇಲ್ಲ, 7048 ಟನ್ ಈವರೆಗೆ ಪೂರೈಕೆಯಾಗಿದೆ. ಯೂರಿಯಾ 8,400 ಮೆ.ಟನ್ ಬೇಡಿಕೆ ಇದ್ದು, 1,594 ಟನ್ ದಾಸ್ತಾನು ಇದೆ. ಏಪ್ರಿಲ್ ಮೊದಲ ವಾರದಲ್ಲಿ 1,227 ಟನ್ ಖರೀದಿ ಮಾಡಿದ್ದಾರೆ ಎಂದು ವಿವರಿಸಿದರು. ಈ ವೇಳೆ ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ರಸಗೊಬ್ಬರ ಬೇಕಾದಷ್ಟು ಸ್ಟಾಕ್ ಇದೇ ಎಂದು ಹೇಳಿ ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುವುದು ಬೇಕಾಗಿಲ್ಲ. ನಮ್ಮ ರೈತರು ಪುಸ್ತಕ ನೋಡಿ ಒಕ್ಕಲುತನ ಮಾಡಲ್ಲ. ಈಗಾಗಲೇ ಒಂದೆರಡು ಮಳೆ ಆಗಿದ್ದು, ರೈತರು ಭೂಮಿ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ನೀರಾವರಿ ಇದ್ದವರು ಸದ್ಯ ಕಬ್ಬು, ಮೆಣಸಿನಗಿಡ, ಹತ್ತಿ ಬೆಳೆ ಹಾಕಿದ್ದಾರೆ. ಇವರಿಗೆ ಯೂರಿಯಾ ಬೇಕಾಗಿದೆ. ತಾಲೂಕಿನಲ್ಲಿರುವ 35 ಸೊಸೈಟಿಗಳಿಗೆ ಆದ್ಯತೆ ನೀಡಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.ಬಳಿಕ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ರಸಗೊಬ್ಬರ ವಿಚಾರದಲ್ಲಿ ಹಾವೇರಿ ಗೋಲಿಬಾರ್‌ಗೆ ಹೆಸರುವಾಸಿಯಾಗಿದೆ. ಇತ್ತಿಚೇಗೆ ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿದ್ದು, ಕಚ್ಚಾ ಸಾಮಗ್ರಿಗಳು ಸಿಗದ ಕಾರಣ ಬರುವ ದಿನಗಳಲ್ಲಿ ರಸಗೊಬ್ಬರ ಅಭಾವ ಸೃಷ್ಟಿಯಾಗುತ್ತದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಎದ್ದಿದೆ. ಅಂತಹ ವದಂತಿಗಳಿಗೆ ಆಸ್ಪದ ನೀಡದೇ ಶೀಘ್ರದಲ್ಲಿ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾಧಿಕಾರಿಗಳ ಜತೆಗೆ ಚರ್ಚೆ ಮಾಡಿ, ರೈತರಿಗೆ ಸಮರ್ಪಕ ಗೊಬ್ಬರ ಪೂರೈಸಬೇಕೆಂದು ತಾಕೀತು ಮಾಡಿದರು. ಎಂಬಿಬಿಎಸ್ ವೈದ್ಯ ಹುದ್ದೆ ಖಾಲಿ: ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಟಿಎಚ್‌ಒ ಡಾ.ಪ್ರಭಾಕರ ಕುಂದೂರ ಅವರು, ತಾಲೂಕಿನ ಮೂರು ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯ ಹುದ್ದೆಗಳು ಖಾಲಿ ಇವೆ. ಕಾಟೇನಹಳ್ಳಿ ಆಸ್ಪತ್ರೆಯ ಆಯುಷ್ ವೈದ್ಯರನ್ನು ಮೂರು ದಿನ ಪ್ರಭಾರಿಯಾಗಿ ಅಗಡಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ. ಎಂಬಿಬಿಎಸ್ ವೈದ್ಯರು ಬಂದ್ರೆ ಸೇವೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಕುಡಿವ ನೀರು ಒದಗಿಸಿ: ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮೇ ಅಂತ್ಯದೊಳಗೆ 12ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದು, ಈ ಗ್ರಾಮಗಳಲ್ಲಿ ಖಾಸಗಿ ಬೊರವೆಲ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಶುದ್ಧ ಕುಡಿವ ನೀರು ಘಟಕ ಸ್ಥಗಿತಗೊಂಡಿರುವ ಗ್ರಾಮಗಳ ಬಗ್ಗೆ ಮಾಹಿತಿ ಕೇಳಿದ ಶಾಸಕರು, ಸುಮಾರು 20 ಘಟಕಗಳು ಬಂದ್ ಆಗಿವೆ ಎಂದಾಗ, ಇಲಾಖೆಯಲ್ಲಿ ಅನುದಾನವಿದ್ದರೆ ದುರಸ್ತಿ ಮಾಡಿಸಿ, ನಿರ್ವಹಣೆಗೆ ಗ್ರಾಪಂ ಅಥವಾ ಏಜೆನ್ಸಿಯವರಿಗೆ ಕೊಡಿ. ಇಲ್ಲವಾದರೆ ಗ್ರಾಪಂ, ಏಜೆನ್ಸಿಯವರನ್ನು ಕರೆದು ಸಭೆ ಮಾಡಿ, ನಿರ್ವಹಣೆಗೆ ಹಸ್ತಾಂತರ ಮಾಡಿ ಸೂಚಿಸಿದರು.

ತಾಪಂ ಆಡಳಿತಾಧಿಕಾರಿ ಮೋಹನ್ ದಂಡಿನ, ತಹಸೀಲ್ದಾರ್‌ ಶರಣಮ್ಮ, ತಾಪಂ ಇಒ ಡಾ. ಪರಮೇಶ ಹುಬ್ಬಳ್ಳಿ, ಬಸವೇಶಗೌಡ ಪಾಟೀಲ, ಪರಮೇಶಪ್ಪ ಮಣ್ಣಮ್ಮನವರ, ಮಲ್ಲಿಕಾರ್ಜುನ ಬೂದಗಟ್ಟಿ, ಸುಮಂಗಲಾ ಇಪ್ಪಿಕೊಪ್ಪ, ಶಂಕ್ರಣ್ಣ ಅಂಬಿಗೇರ, ಮಾದೇವಪ್ಪ ಹೊಸಳ್ಳಿ ಇತರರು ಇದ್ದರು. ನೋಟಿಸ್ ಜಾರಿ ಮಾಡಿ: ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಇದ್ದರೂ ಸಹಿತ ಹಲವಾರು ಬಾರಿ ದೂರವಾಣಿ ಕರೆ ಮಾಡಿದರೂ ಸಭೆಗೆ ಹಾಜರಾಗದೆ ಗೈರು ಆಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಶಾಸಕ ರುದ್ರಪ್ಪ ಲಮಾಣಿ ತಾಪಂ ಇಒ ಅವರಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನವಾಗಿದ್ದ 210 ಮೊಬೈಲ್ ಪತ್ತೆ ಮಾಡಿದ ಪೊಲೀಸರು
ಜಾನಪದ ಗಾಯಕ ಬಾನಂದೂರು ಕೆಂಪಯ್ಯಗೆ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ