ಜಾನಪದ ಗಾಯಕ ಬಾನಂದೂರು ಕೆಂಪಯ್ಯಗೆ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Apr 14, 2026, 02:15 AM IST
ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸಾಧಕರು ಎಂದಿಗೂ ಮರೆಯಾಗುವುದಿಲ್ಲ. ಅವರು ದೇಹತಃ ಇಲ್ಲದಿದ್ದರೂ ಜನರ ನಾಲಿಗೆ ಮತ್ತು ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ

ಬಳ್ಳಾರಿ: ಸಾಧಕರು ಎಂದಿಗೂ ಮರೆಯಾಗುವುದಿಲ್ಲ. ಅವರು ದೇಹತಃ ಇಲ್ಲದಿದ್ದರೂ ಜನರ ನಾಲಿಗೆ ಮತ್ತು ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ ಎಂಬುದಕ್ಕೆ ತೊಗಲುಗೊಂಬೆ ಮಾಂತ್ರಿಕ ಬೆಳಗಲ್ಲು ವೀರಣ್ಣನವರ ಬದುಕೇ ಸಾಕ್ಷಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಬಣ್ಣಿಸಿದರು.

ಶ್ರೀರಾಮಾಂಜಿನೇಯ ತೊಗಲುಗೊಂಬೆ ಮೇಳ ಟ್ರಸ್ಟ್‌ ವತಿಯಿಂದ ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಮಹತ್ತರ ಸಾಧನೆ ಮಾಡಿದವರು ತಮ್ಮ ಜೀವನಕಾಲದಲ್ಲಿಯೇ ಆದರ್ಶಗಳನ್ನು ನಿರ್ಮಿಸಿ, ಇತರರಿಗೆ ದಾರಿದೀಪವಾಗುತ್ತಾರೆ. ಪರಿಶ್ರಮ, ದೃಢಸಂಕಲ್ಪ ಮತ್ತು ನಿಷ್ಠೆಯಿಂದ ಸಾಧನೆ ಮಾಡಿದವರು ಸಮಾಜದ ನೆನಪಿನಲ್ಲಿ ಸದಾಕಾಲ ಉಳಿಯುತ್ತಾರೆ. ಬೆಳಗಲ್ಲು ವೀರಣ್ಣನವರು ತಮ್ಮ ಇಡೀ ಬದುಕನ್ನು ತೊಗಲುಗೊಂಬೆ ಕಲಾ ಪ್ರಕಾರದ ಬೆಳವಣಿಗೆಗೆ ಸವೆಸಿದರು. ಅತ್ಯಂತ ಸಂಕಷ್ಟ ಕಾಲದಲ್ಲೂ ತೊಗಲುಗೊಂಬೆ ಕಲೆಯಿಂದ ದೂರ ಉಳಿಯದಂತೆ ಅಪರೂಪದ ಕಲಾ ಪ್ರಕಾರದ ಉಳಿವಿಗೆ ಅಪರಿಮಿತವಾಗಿ ಶ್ರಮಿಸಿದರು. ನಾಡಿನ ಸಾಂಸ್ಕೃತಿಕ ಹೆಜ್ಜೆ ಗುರುತಂತಿರುವ ವೀರಣ್ಣನಂತಹ ಮಹನೀಯನನ್ನು ಸದಾ ಸ್ಮರಿಸುವ ಕೆಲಸ ಬೆಳಗಲ್ಲು ಹನುಮಂತು ದಂಪತಿ ಮಾಡುತ್ತಿರುವುದು ಸ್ಮರಣೀಯ ಕಾರ್ಯ. ಮಕ್ಕಳಾದವರು ತಂದೆ-ತಾಯಿಗಳಿಗೆ ಗುಡಿ-ಗುಂಡಾರಗಳನ್ನು ನಿರ್ಮಿಸಬೇಕಾಗಿಲ್ಲ. ಎದೆಯಲ್ಲಿಟ್ಟುಕೊಂಡು ಪೂಜಿಸಿದರೆ ಸಾಕು. ಎದೆಯ ಗೂಡಿಗಿಂತ ದೊಡ್ಡ ಗುಡಿ ಮತ್ತೊಂದಿಲ್ಲ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಅವರು ಬೆಳಗಲ್ಲು ವೀರಣ್ಣನವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.

ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಬೆಳಗಲ್ಲು ವೀರಣ್ಣನವರ ಸ್ಮಾರಕ ಪ್ರಶಸ್ತಿ ಸಮಾರಂಭ ನೋಡಿ ಕಣ್ತುಂಬಿ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲಾಡಳಿತ ನಡೆಸುವ ಸಮಾರಂಭಗಳು ಸಾಂಕೇತವಾಗಿರುತ್ತವೆ. ಯಾಂತ್ರೀಕರಣದಂತೆ ಭಾಸವಾಗುತ್ತದೆ. ಜಿಲ್ಲಾಡಳಿತ ಕೈಗೊಳ್ಳುವ ಸಾಂಸ್ಕೃತಿಕ ಸಮಾರಂಭಗಳಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ. ಲವಲವಿಕೆಯಿಂದ ಪಾಲ್ಗೊಳ್ಳುವುದು ಕಂಡು ಬರುವುದಿಲ್ಲ. ಬೆಳಗಲ್ಲು ವೀರಣ್ಣನವರ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಅಚ್ಚುಕಟ್ಟುತನದಿಂದ ಕೂಡಿದೆ ಎಂದು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಕಲ್ಯಾಣಸ್ವಾಮಿ, ರುದ್ರ ಟ್ರಸ್ಟ್‌ನ ಅಧ್ಯಕ್ಷ ರವಿಶಂಕರ್ ಗುರೂಜಿ ಮಾತನಾಡಿದರು. ಹಿರಿಯ ರಂಗಭೂಮಿ ಕಲಾವಿದ ಗಾದಿಗನೂರು ಹಾಲಪ್ಪ, ಮೈಸೂರಿನ ರಾಜೇಶ್ವರಿ ವಸ್ತ್ರಾಲಂಕಾರ ಬಿ.ಎಂ.ರಾಮಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್.ಮಂಜೇಶ್ ಚನ್ನಾಪುರ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸತೀಶ್ ಹಿರೇಮಠ್, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಭಾಗವಹಿಸಿದ್ದರು. ಟ್ರಸ್ಟ್‌ ಮುಖ್ಯಸ್ಥ ಬೆಳಗಲ್ಲು ಹನುಮಂತು ಪ್ರಾಸ್ತಾವಿಕ ಮಾತನಾಡಿದರು. ಬಿ.ವಿ.ಲಕ್ಷ್ಮಿ, ಎಸ್.ವಿ.ರೇಖಾ, ಗಗನ್, ಗೌತ್, ದಿನಕರ್, ಶಾರದಾ ಬೆಳಗಲ್ಲು ಮತ್ತಿತರರಿದ್ದರು.

ಕೆ.ಬಸವಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಆಂಧ್ರಪ್ರದೇಶದ ನಿಮ್ಮಲಕುಂಟ ಶ್ರೀವನಾರ್ಚ ರಾಮಕೃಷ್ಣ ತೊಗಲುಗೊಂಬೆ ಆಟ ಕಲಾ ತಂಡದಿಂದ ಸೀತಾ ಅಪಹರಣ ತೊಗಲುಗೊಂಬೆ ಪ್ರದರ್ಶನ ಜರುಗಿತು.

ಕಾರ್ಯಕ್ರಮ ಶುರುಮುನ್ನ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಜರುಗಿತು. ಬೆಳಗಲ್ಲು ವೀರಣ್ಣನವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ಗವಿಯಪ್ಪ ವೃತ್ತದ(ಮೋತಿ) ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ತೊಗಲುಗೊಂಬೆ, ಬಯಲಾಟ ಸೇರಿದಂತೆ 11ಕ್ಕೂ ಹೆಚ್ಚು ಕಲಾ ತಂಡಗಳ ನೂರಾರು ಜನರು ಭಾಗವಹಿಸಿದ್ದರು.

ಸರ್ಕಾರದಿಂದ ಪ್ರಶಸ್ತಿ ನೀಡಲಿ:

ತೊಗಲುಗೊಂಬೆ ಕಲಾ ಪ್ರಕಾರವನ್ನು ವಿಶ್ವಕ್ಕೆ ಪರಿಚಯಿಸಿದ ನಾಡೋಜ ಬೆಳಗಲ್ಲು ವೀರಣ್ಣನವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಬೇಕು. ಈ ಕುರಿತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರಿಗೆ ಬೆಳಗಲ್ಲು ವೀರಣ್ಣನವರ ಒಡನಾಡಿ ಹಾಗೂ ಹಿರಿಯ ರಂಗಕರ್ಮಿ ಮೈಸೂರು ರಾಮಚಂದ್ರಪ್ಪ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು