ಧಾರವಾಡ: ಸಾಹಿತ್ಯದಲ್ಲಿ ಮಹಿಳೆಯರ ಜೀವನಾನುಭವದ ಚಿತ್ರಣವಿದೆ. ಈ ಸಾಹಿತ್ಯ ಸಮಾನತೆಗಾಗಿ ಧ್ವನಿ ಎತ್ತುವುದಾಗಿದೆ ಎಂದು ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಡಾ. ಅಜಿತ ಪ್ರಸಾದ ಹೇಳಿದರು.
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿಗೆ ತನ್ನದೇ ಆದ ಮೌಲ್ಯವಿದೆ. ಕಳೆದ 50 ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ಮಹಾನ್ ಗ್ರಂಥ ರಚನೆಕಾರರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ.ವಿ.ವ. ಸಂಘ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ಬಹುಮಾನಿತ ಕೃತಿಗಳನ್ನು ಸಮಿತಿ ಮೂಲಕ ಆಯ್ಕೆ ಮಾಡುತ್ತ ಬಂದಿದೆ. ಕ.ವಿ.ವ. ಸಂಘ ಹಾಗೂ ಜೆ.ಎಸ್.ಎಸ್. ನಡುವೆ ಅವಿನಾಭಾವ ಸಂಬಂಧವಿದೆ. ಕ.ವಿ.ವಗೆ ಯಾವತ್ತೂ ನಮ್ಮ ಸಹಕಾರವಿದೆ ಎಂದು ಹೇಳಿದರು.
ಡಾ. ಶರಣಮ್ಮ ಗೊರೇಬಾಳ ಕಾದಂಬರಿಗಳ ಕುರಿತು ನಿರ್ಣಾಯಕ ಪರ ನುಡಿಗಳನ್ನಾಡಿ ಕಾದಂಬರಿಗಳು ಓದುಗರಲ್ಲಿ ಭಾವನಾತ್ಮಕ ಅನುಭವನ್ನುಂಟು ಮಾಡುತ್ತವೆ. ಈ ಕಾದಂಬರಿಗಳಲ್ಲಿ ಮಾನವನ ಬದುಕಿನ ವಿವಿಧ ಮುಖ ಅನಾವರಣಗೊಳಿಸಲಾಗಿದೆ. ಆಹ್ವಾನಿತ ಎಲ್ಲ ಕಾದಂಬರಿಗಳು ಮನೋಜ್ಞವಾಗಿವೆ. ಕಾದಂಬರಿಗೆ ಪುಟಗಳ ಮಿತಿ ಇರಬಾರದು. ಭಾಷಾ ಶೈಲಿ, ನಿರೂಪಣೆ, ಪ್ರಭಾವ ಬಹಳ ಮುಖ್ಯ. ಎಲ್ಲ 17 ಕಾದಂಬರಿಗಳು ವಿಭಿನ್ನ ನೆಲೆಗಟ್ಟಿನ ಮೇಲಿವೆ. ಗೀತಾ ಸೀತಾರಾಮ ಅವರ ಅಹಲ್ಯಾಬಾಯಿ ಹೋಳ್ಕರ ಐತಿಹಾಸಿಕ ಕಾದಂಬರಿಯಾಗಿದ್ದು, ಕುತೂಹಲಕಾರಿಯಾಗಿದೆ ಎಂದರು.ಡಾ. ಶ್ರೀಧರ ಹೆಗಡೆ ಭದ್ರನ್ ಇತರ ಲೇಖನದ ಬಗ್ಗೆ ಮಾತನಾಡಿ, ದೀತನನ! ಎಂಬ ಡಾ. ಕೆ.ಎಸ್. ಪವಿತ್ರಾಅವರ ಲೇಖನ ಸೃಜನಶೀಲತೆಯಿಂದ ಕೂಡಿದೆ. ಪವಿತ್ರಾ ಬಹುಮುಖಿ ಲೇಖಕರು. ಅವರ ಇಡೀ ಕುಟುಂಬದಿಂದ 200 ಕೃತಿಗಳು ಪ್ರಕಟವಾಗಿವೆ. ಅವರ ಲೇಖನಗಳಲ್ಲಿ ವೈಚಾರಿಕ ಪ್ರಜ್ಞೆ ಇದೆ ಎಂದರು.
ಡಾ. ವೈ.ಬಿ. ಯಾಕೊಳ್ಳಿ ಕವನ ಸಂಕಲನ ಕುರಿತು ಮಾತನಾಡಿ, 46 ಕವನ ಸಂಕಲನದಲ್ಲಿ ಸವಿತಾ ನಾಗಭೂಷಣ ಅವರ ದಿನದ ಪ್ರಾರ್ಥನೆ ಸಂಕಲನ ಸರಳ ಹಾಗೂ ಮನಸ್ಸಿಗೆ ಮುದ ನೀಡುವಂತಹದ್ದಾಗಿದೆ. ಇದರಲ್ಲಿ ಬದುಕಿನ ಮೌಲ್ಯವಿದೆ ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೀವಂಧರಕುಮಾರ, ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ಡಾ. ಶಾಂತಿನಾಥ ದಿಬ್ಬದ, ಮಹಾವೀರ ಉಪಾಧ್ಯೆ, ಗೋವಿಂದರಾಜ ತಳಕವಾಡ, ಬಿ.ಕೆ. ಹೊಂಗಲ್, ಸುಜಾತಾ ಹಡಗಲಿ ಸೇರಿದಂತೆ ಸಾಹಿತ್ಯಾಸಕ್ತರು, ಜೆಎಸ್ಎಸ್ ಸಿಬ್ಬಂದಿ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ನಿರೂಪಿಸಿದರು.