ಕನ್ನಡಪ್ರಭ ವಾರ್ತೆ ಮಾಲೂರು
ಮಡಿವಾಳ ಗೇಟ್ ಬಳಿಯ ಜೆಡಿಎಸ್ ಕಚೇರಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಸ್ಥಳೀಯ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರ ಕ್ಷೇತ್ರದ ಚುನಾವಣೆ ಮುಂಬರಲಿರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನ ಸಭೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ವಿಧಾನ ಪರಿಷತ್ ಗೆ ವಿದ್ಯಾವಂತರು, ಮೇಧಾವಿಗಳು ಹಾಗೂ ಜನರ ಸಮಸ್ಯೆ ಗಳನ್ನು ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವವರು ಆಯ್ಕೆಯಾಗಬೇಕು. ಹೀಗಾಗಿ ವೈದ್ಯರು, ವಕೀಲರು, ಇಂಜಿನಿಯರ್ ಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಾಫ್ಟ್ ವೇರ್ ಉದ್ಯೋಗಿಗಳು ಸೇರಿ ಎಲ್ಲ ಪದವೀಧರ ಮತದಾರರನ್ನು ಮುಖಂಡರು ಭೇಟಿಯಾಗಿ ಮತಯಾಚನೆ ಮಾಡಬೇಕು ಎಂದರು.
ಈ ತಿಂಗಳ ೨೩ ರಂದು ಮತದಾನ ನಡೆಯಲಿರುವ ಹಿನ್ನೆಲೆ ಮತದಾರರನ್ನು ಕೊನೆಯ ಕ್ಷಣದವರೆಗೆ ಕಾಯದೆ ಮುಂಚಿತವಾಗಿಯೇ ಭೇಟಿ ಮಾಡಬೇಕು. ದಸರಾ ರಜೆ ಹಾಗೂ ಹಬ್ಬದ ಹಿನ್ನೆಲೆ ಕೆಲವರು ತಮ್ಮ ಊರುಗಳಿಗೆ ತೆರಳುವ ಸಾಧ್ಯತೆ ಇರುವುದರಿಂದ ಎಲ್ಲ ಮತದಾರನ್ನು ತಲುಪುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಮತದಾನದ ಮೊದಲ ಪ್ರಾಶಸ್ತ್ಯ ಮತವನ್ನು ಸರಿಯಾಗಿ ಚಲಾಯಿಸುವ ಕುರಿತು ಅರಿವು ಮೂಡಿಸಬೇಕು ಎಂದರು.ಎನ್.ಡಿ.ಎ. ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಗೆಲುವಿಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದ ಕೃಷ್ಣಾ ರೆಡ್ಡಿ ಅವರು, ಕೇವಲ ಸಭೆಗಳಿಗೆ ಸೀಮಿತವಾಗದೆ ಹಳ್ಳಿ- ಹಳ್ಳಿಗಳಲ್ಲಿರುವ ಮತದಾರರನ್ನು ಸಂಪರ್ಕಿಸುವ ಕೆಲಸ ಆಗಬೇಕು. ಇದು ಮುಂಬರಲಿರುವ ಪಂಚಾಯ್ತಿ ಚುನಾವಣೆಗಳಿಗೆ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ಹಿರಿಯ ಮುಖಂಡರಾದ ವಿ.ಹನುಮಪ್ಪ, ಹರೀಶ್ ಗೌಡ, ಗೋಪಾಲ್ ಗೌಡ, ಮೈಲಾಂಡಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು.