ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬೆಳಾಲು ಗ್ರಾಮದ ಅನಂತೋಡಿಯ ಅನಂತಪದ್ಮನಾಭ ದೇವಸ್ಥಾನದ ನಾಲ್ಕು ಎಕ್ರೆ ಗದ್ದೆಯಲ್ಲಿ ಬೆಳೆಸಿದ ಭತ್ತದ ಪೈರನ್ನು ಒಂದು ಸಾವಿರಕ್ಕೂ ಮಿಕ್ಕಿ ಸ್ವಯಂ ಸೇವಕರು ಭಾನುವಾರ ಒಂದೇ ಗಂಟೆಯಲ್ಲಿ ಕಟಾವು ಮಾಡಿ ಗಮನ ಸೆಳೆದರು.‘ಬದುಕು ಕಟ್ಟೋಣ’ ತಂಡದ ನೇತೃತ್ವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕ್ರೀಡಾ ಸಂಘ, ಬೆಳ್ತಂಗಡಿ ರೋಟರಿ ಕ್ಲಬ್, ತಾಲೂಕು ಪತ್ರಕರ್ತರ ಸಂಘ ಹಾಗೂ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು.ಯುವಜನತೆಯ ಸೇವೆ ಶ್ಲಾಘಿಸಿದ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಅನ್ನಬ್ರಹ್ಮನ ಸೇವೆ ಪವಿತ್ರ ಕಾಯಕವಾಗಿದೆ. ಇಂದು ಕೈ ಕೆಸರು ಮಾಡುವ ಕೃಷಿ ಕೆಲಸ ಯಾರಿಗೂ ಇಷ್ಟವಿಲ್ಲ. ಹಲವು ವರ್ಷ ಬರಡು ಭೂಮಿಯಾಗಿದ್ದ ಗದ್ದೆಯನ್ನು ಹಸನು ಮಾಡಿ ನೇಜಿ ನಾಟಿ ಮಾಡಿ, ಪೈರು ಕಟಾವು ಮಾಡಿದ ಯುವಜನರ ಸೇವೆ ಶ್ಲಾಘನೀಯ ಎಂದರು.
‘ಯುವಸಿರಿ, ರೈತ ಭಾರತದ ಐಸಿರಿ’ ಒಂದು ಸುಂದರ, ಆಕರ್ಷಕ ಕಾರ್ಯಕ್ರಮವಾಗಿದ್ದು, ಯುವಜನತೆಗೆ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.ಪೈರು ಕಟಾವು ಕಾರ್ಯಕ್ರಮ ಉದ್ಘಾಟಿಸಿದ ಸೋನಿಯಾ ಯಶೋವರ್ಮ ಮಾತನಾಡಿ, ಮಣ್ಣಿಗೂ, ಮಕ್ಕಳಿಗೂ ಅವಿನಾಭಾವ ಸಂಬಂಧವಿದೆ. ಮಕ್ಕಳಿಗೆ ಕುತೂಹಲ, ಆಸಕ್ತಿ, ಜಾಸ್ತಿ ಇದ್ದು, ಕೃಷಿ ಚಟುವಟಿಕೆಗಳಲ್ಲಿ ಖುಷಿಯಿಂದ ಭಾಗವಹಿಸಿ ಆನಂದಿಸಬೇಕು ಎಂದರು.
ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ಎಸ್‌ಡಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಭತ್ತದ ಕೃಷಿ ಬಗ್ಗೆ ಮಾಹಿತಿ, ತರಬೇತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಸಹಕಾರ ನೀಡಿದವರಿಗೆ ಸನ್ಮಾನ:
ಭತ್ತದ ಕೃಷಿ ಬಗ್ಯೆ ಸಕ್ರಿಯ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬೆಳಾಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿದ್ಯಾ ಶ್ರೀನಿವಾಸ ಗೌಡ, ಎಸ್.ಡಿ.ಎಂ. ಕಾಲೇಜಿನ ಕ್ರೀಡಾ ನಿರ್ದೇಶಕ ರಮೇಶ್ ಮತ್ತು ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿದರು.
ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮತ್ತು ಶರತ್‌ಕೃಷ್ಣ ಪಡ್ವೆಟ್ನಾಯ ಇದ್ದರು.ವಕೀಲ ಬಿ.ಕೆ. ಧನಂಜಯ್ ರಾವ್ ಸ್ವಾಗತಿಸಿದರು. ಪ್ರೊ. ಮಹೇಶ್ ಕುಮಾರ ಶೆಟ್ಟಿ ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
............ಮುಖ್ಯಾಂಶಗಳು
-ಅಕ್ಕಿಯನ್ನು ದೇವಾಲಯದಲ್ಲಿ ದೇವರ ನೈವೇದ್ಯಕ್ಕೆ ವಿನಿಯೋಗಿಸಲಾಗುವುದು.-ಬೈ ಹುಲ್ಲನ್ನು ಕಳೆಂಜದ ಗೋ ಶಾಲೆಗೆ ಬಳಸಲಾಗುವುದು.
-ಪ್ರತಿ ವರ್ಷ ಲೋಕಕಲ್ಯಾಣಕ್ಕಾಗಿ ಕೃಷಿ ಕಾಯಕ ಮಾಡಲಾಗುವುದು ಎಂದು ಬದುಕು ಕಟ್ಟೋಣ ತಂಡದ ರೂವಾರಿ ಉಜಿರೆಯ ಮೋಹನ ಕುಮಾರ್ ಮತ್ತು ರಾಜೇಶ್ ಪೈ ತಿಳಿಸಿದ್ದಾರೆ.-ಸ್ವಯಂ ಸೇವಕರಿಗೆ ಪೈರು ಕಟಾವಿಗೆ ಒಂದು ಸಾವಿರ ಕತ್ತಿ ಮತ್ತು ತಲೆಗೆ ಇಡಲು ಒಂದು ಸಾವಿರ ಅಡಿಕೆ ಹಾಳೆಯ ಟೊಪ್ಪಿ ವಿತರಿಸಲಾಯಿತು.
-ಪೈರನ್ನು ಗದ್ದೆಯಿಂದ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡುಹೋಗಿ ದೇವಸ್ಥಾನದ ಎದುರು ಪೈರಿನಿಂದ ಭತ್ತ ಬೇರ್ಪಡಿಸಲಾಯಿತು.-ಹರೀಶ್ ಮತ್ತು ಸ್ಮಿತೇಶ್ ನಿರ್ದೇಶನದಲ್ಲಿ ರೂಪಿಸಿದ ಬೆಳಾಲು ಭತ್ತದ ಕೃಷಿ ಬಗ್ಯೆ ಕಿರುಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ನಾಲ್ಕು ಪ್ರಶಸ್ತಿಗಳು ದೊರಕಿವೆ. ವಿಶ್ವದಾಖಲೆಗೂ ಆಯ್ಕೆಯಾಗಿದೆ.