- ನಮಗೆ ಅಪಮಾನವಾಗಿದೆ, ಬೇರೆಯವರಾಗಿದ್ದರೆ ಉರುಲು ಹಾಕಿಕೊಳ್ಳುತ್ತಿದ್ದರು: ಯತ್ನಾಳ್ ಹೇಳಿಕೆ
ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ನಾನು ಬೇರೆಯವರಂತೆ ಲೂಟಿ ಮಾಡಿಲ್ಲ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಭ್ರಷ್ಟಾಚಾರದ ವಿರುದ್ಧ ಹಾಗೂ ಕುಟುಂಬ ರಾಜಕಾರಣ ವಿರುದ್ಧದ ಹೋರಾಟ ಎಂದರು.ದಾವಣಗೆರೆ, ತುಮಕೂರು, ಬೀದರ್‌ನಲ್ಲಿ ಒಳಒಪ್ಪಂದ ಮಾಡಿಕೊಂಡವರಿಗೆ ತಕ್ಕ ಶಾಸ್ತಿಯಾಗಬೇಕು. ಹಾದಿಬೀದಿಯಲ್ಲಿ ಹಂದಿಗಳು ಹೇಳುತ್ತವೆಂದರೆ ಅಂತಹವರಿಗೆ ನಾನೇಕೆ ಉತ್ತರ ನೀಡಲಿ? ದಾವಣಗೆರೆಯಲ್ಲಿ ಎರಡು ಹಂದಿಗಳಿದ್ದು, ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿ ವಿಜಯೇಂದ್ರ ಮನೆ ಮುಂದೆ ನೀವು ನಿಲ್ಲಿ. ಅಲ್ಲಿ ವಿಜಯೇಂದ್ರ ಗುಣಗಾನ ಮಾಡಿ ಎಂದು ಮಾಧ್ಯಮಗಳ ಮೇಲೆ ಯತ್ನಾಳ್ ಆಕ್ರೋಶಗೊಂಡರು.
ವಿಜಯೇಂದ್ರ ಪರವಾಗಿಯೇ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ನಮ್ಮ ವಿರುದ್ಧದ ವರದಿಗಳು ಬರುತ್ತಿವೆ. ದೆಹಲಿಯಲ್ಲಿ ಯತ್ನಾಳ್‌ಗೆ ಅಪಮಾನ ಖಚಿತ, ರಾಷ್ಟ್ರೀಯ ನಾಯಕರು ಭೇಟಿಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಮಾಡುತ್ತಾರೆ. ನಾವು ದೆಹಲಿಗೆ ಹೋಗುವುದು ನಿಶ್ಚಿತ. ದಾವಣಗೆರೆ ಜಿಎಂಐಟಿ ಗೆಸ್ಟ್ ಹೌಸ್‌ನಲ್ಲಿ ಯಾವುದೇ ಸಭೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
- - -
- ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಶೋಕ ಕಾರ್ಯ ನಿರ್ವಹಣೆ
ವಿಪಕ್ಷ ನಾಯಕನಾಗಿ ಆರ್.ಅಶೋಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಲವು ಶಾಸಕರಿಗೆ ಒಂದಿಷ್ಟು ಅಸಮಾಧಾನ ಇರಬಹುದು. ಆದರೆ, ನಮಗಂತೂ ಆರ್.ಅಶೋಕ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ. ಈ ಹಿಂದೆ ಅಧಿಕಾರ ಇದ್ದಾಗ ಬೆಡ್ ಶೀಟ್ ಹೊತ್ತುಕೊಂಡು ಹೋದವರು ಬದಲಾಗಬೇಕೆಂಬುದು ನಮ್ಮ ಹೋರಾಟ. ಕುಟುಂಬ ರಾಜಾಕರಣದ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
- - - ಕೋಟ್ ಒಡೆದ ಮನಸ್ಸುಗಳನ್ನು ಒಂದು ಮಾಡಲು ಶ್ರೀರಾಮುಲು ಯಾತ್ರೆ ಮಾಡುವುದು ಒಳ್ಳೆಯ ವಿಚಾರವಾಗಿದ್ದು, ಅದನ್ನು ನಾನು ಸ್ವಾಗತ ಮಾಡುತ್ತೇನೆ. ಒಡೆದ ಮನಸ್ಸುಗಳನ್ನು ಒಂದು ಮಾಡುವುದು ಒಳ್ಳೆಯದೆ. ಆದರೆ, ಭ್ರಷ್ಟಾಚಾರ ಮಾಡುವವರನ್ನು, ಕುಟುಂಬ ರಾಜಕಾರಣ ಮಾಡುವವರ ವಿರುದ್ಧ ನಾವಿದ್ದೇವೆ
- ಬಸವನಗೌಡ ಪಾಟೀಲ್ ಯತ್ನಾಳ, ಶಾಸಕ, ವಿಜಯಪುರ ಕ್ಷೇತ್ರ