ಕನ್ನಡಪ್ರಭ ವಾರ್ತೆ ತುರುವೇಕೆರೆ
ಕುಣಿಕೇನಹಳ್ಳಿಯಲ್ಲಿ ಎಲ್ಲಾ ಸಮುದಾಯದವರಿದ್ದಾರೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಇಲ್ಲಿಯ ಕೆಂಪಮ್ಮ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ದಲಿತ ಸಮುದಾಯದ ಸಹಭಾಗಿತ್ವವೂ ಇದೆ. ಆದರೆ ದಲಿತ ಸಮುದಾಯದ ಹಲವಾರು ಮಂದಿ ವಿವಿಧ ಕಾರಣಗಳಿಂದ ದೇವಾಲಯದೊಳಗೆ ಪ್ರವೇಶಿಸದೇ ದೇವಾಲಯದ ಹೊರಗಡೆ ನಿಂತು ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು.
ಆದರೆ,ಶುಕ್ರವಾರ ಸಾಯಂಕಾಲ ಛಲವಾದಿ ಮಹಾಸಭಾದ ಮುಖಂಡರಾದ ಕುಣಿಕೇನಹಳ್ಳಿ ಜಗದೀಶ್, ಡೊಂಕಿಹಳ್ಳಿ ರಾಮಣ್ಣ, ಪುರದ ರಾಮಚಂದ್ರಪ್ಪ ಮತ್ತು ಮಾರಪ್ಪನಹಳ್ಳಿಯ ಸೋಮಶೇಖರ್ ಸೇರಿ ಹಲವಾರು ದಲಿತ ಮುಖಂಡರು ಶ್ರೀ ಕೆಂಪಮ್ಮ ದೇವಿ ದೇವಾಲಯಕ್ಕೆ ಪ್ರಪ್ರಥಮವಾಗಿ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು.ಮುಂಜಾಗ್ರತೆ: ಕುಣಿಕೇನಹಳ್ಳಿಯ ಗ್ರಾಮದೇವತೆ ಕೆಂಪಮ್ಮ ದೇವಿ ದೇವಾಲಯಕ್ಕೆ ದಲಿತ ಸಮುದಾಯದವರು ಪ್ರವೇಶಿಸಿರುವುದರಿಂದ ಗ್ರಾಮದಲ್ಲಿ ಗೊಂದಲ ಏರ್ಪಡಬಹುದೆಂಬ ಶಂಕೆಯಿಂದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಸೂಕ್ತ ಪೊಲೀಸ್ ಬಂದೋಬಸ್ತ್ ಅನ್ನು ನಿಯೋಜಿಸಿದ್ದರು. ಸಮಾಜ ಕಲ್ಯಾಣಾ ಇಲಾಖಾ ಅಧಿಕಾರಿ ತ್ರಿವೇಣಿ ಸಹ ಮೊಕ್ಕಾಂ ಹೂಡಿದ್ದರು.
ತಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ದಲಿತ ಸಮುದಾಯದವರು ಗ್ರಾಮದ ದೇವಾಲಯದೊಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದರು. ದೇವರು ನಮಗೇನು ತೊಂದರೆ ಕೊಡುತ್ತಾನೋ ಎಂಬ ಮೂಢನಂಬಿಕೆಯಿಂದ ಹಲವರು ದೇವಾಲಯದೊಳಗೆ ಪ್ರವೇಶ ಮಾಡುತ್ತಿರಲಿಲ್ಲ. ಆದರೆ ಹಲವಾರು ವಿಚಾರವಂತರು ದಲಿತ ಸಮುದಾಯದವರಿಗೆ ವೈಜ್ಞಾನಿಕತೆಯ ತಿಳುವಳಿಕೆ ನೀಡಿ, ಇಂದು ದೇವಾಲಯ ಪ್ರವೇಶಿಸುವಂತೆ ಜ್ಞಾನಾರ್ಜನೆ ಮಾಡಿದರು ಎಂದು ಜಗದೀಶ್ ಹೇಳಿದರು.
ಕುಣಿಗಲ್ ಡಿವೈಎಸ್‌ಪಿ ಓಂಪ್ರಕಾಶ್, ತುರುವೇಕೆರೆ ಸಿಪಿಐ ಬಿ.ಎನ್.ಲೋಹಿತ್, ದಂಡಿನಶಿವರ ಪಿಎಸ್‌ಐ ಚಂದ್ರಕಾಂತ, ಸಮಾಜಕಲ್ಯಾಣ ಇಲಾಖೆ ನಿರ್ದೇಶಕಿ ತ್ರಿವೇಣಿ, ಕಸಬಾ ಕಂದಾಯ ತನಿಖಾಧಿಕಾರಿ ಶಿವಕುಮಾರ ಸ್ವಾಮಿ, ಗ್ರಾಮಲೆಕ್ಕಾಧಿಕಾರಿ ರಮೇಶ್, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ದೊಂಕಿಹಳ್ಳಿ ರಾಮಣ್ಣ, ಕಾರ್ಯಾಧ್ಯಕ್ಷ ಎಂ.ಎಸ್.ಸೋಮಶೇಖರಯ್ಯ ಉಪಾಧ್ಯಕ್ಷ ಬಿ.ಎನ್.ರಾಮಚಂದ್ರಯ್ಯ ಸದಸ್ಯರಾದ ಪ್ರಸನ್ನಕುಮಾರ್ ಮತ್ತು ದಲಿತ ಕುಟುಂಬದವರು ಇದ್ದರು.