ಬೊಂಬೆನಾಡಿನ ಕದನಕ್ಕೆ ಘಟಾನುಘಟಿ ನಾಯಕರ ಎಂಟ್ರಿ

KannadaprabhaNewsNetwork | Updated : Oct 31 2024, 02:09 AM IST

ಸಾರಾಂಶ

ರಾಮನಗರ: ತೀವ್ರ ಜಿದ್ದಾಜಿದ್ದಿನಿಂದಾಗಿ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಕಣದಲ್ಲಿ ಧೂಳೆಬ್ಬಿಸಲು ದೀಪಾವಳಿ ಹಬ್ಬದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳ ಘಟಾನುಘಟಿ ನಾಯಕರು ಎಂಟ್ರಿ ಕೊಡುತ್ತಿದ್ದಾರೆ.

ರಾಮನಗರ: ತೀವ್ರ ಜಿದ್ದಾಜಿದ್ದಿನಿಂದಾಗಿ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಕಣದಲ್ಲಿ ಧೂಳೆಬ್ಬಿಸಲು ದೀಪಾವಳಿ ಹಬ್ಬದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳ ಘಟಾನುಘಟಿ ನಾಯಕರು ಎಂಟ್ರಿ ಕೊಡುತ್ತಿದ್ದಾರೆ.

ಉಪಚುನಾವಣೆಗೆ 13 ದಿನಗಳಷ್ಟೇ ಬಾಕಿ ಉಳಿದಿದ್ದು, ಮತದಾರರನ್ನು ಸೆಳೆಯಲು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸವ ಹೆಚ್ಚಿಸಲು ರಾಜಕೀಯ ನಾಯಕರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಕೆಲ ಸಿನಿ ತಾರೆಯರು ಅಭ್ಯರ್ಥಿ ಪರ ಪ್ರಚಾರ ನಡೆಸಿ ಸ್ಟಾರ್ ವಾರ್ ಗೆ ರಂಗು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಎಲ್ಲೆಲ್ಲಿ ಒಕ್ಕಲಿಗ, ದಲಿತರು, ಅಲ್ಪಸಂಖ್ಯಾತರು, ಬೆಸ್ತರು, ಬಲಿಜಗರು... ಹೀಗೆ ಯಾವ ವರ್ಗ, ಸಮುದಾಯದ ಮತಗಳು ಅಧಿಕವಾಗಿವೆಯೇ ಆ ಭಾಗಗಳಲ್ಲಿ ಅದೇ ವರ್ಗ, ಸಮುದಾಯದ ಪ್ರಬಲ ನಾಯಕರಿಗೆ ಉಭಯ ಪಕ್ಷಗಳ ವರಿಷ್ಠರು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡುತ್ತಿದ್ದಾರೆ. ಆಯಾಯ ಸಮುದಾಯದ ನಾಯಕರೇ ಅಭ್ಯರ್ಥಿಗಳಿಗೆ ಮತ ತಂದುಕೊಡುವ ಟಾಸ್ಕ್ ನೀಡಲಾಗುತ್ತಿದೆ.

ರಣರಂಗಕ್ಕೆ 10 ಸಚಿವರು, 30 ಶಾಸಕರ ಪಡೆ:

ಈಗಾಗಲೇ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಕೈ ಬಲಪಡಿಸುವ ವಿಶ್ವಾಸ ತುಂಬಿ ಹೋಗಿದ್ದಾರೆ. ಸೈನಿಕ ಯೋಗೇಶ್ವರ್ ಪರವಾಗಿ ಮತಬೇಟೆಗಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ 10 ಸಚಿವರು, 30 ಶಾಸಕರ ಪಡೆ ಬಂದಿಳಿಯಲಿದೆ. ಇವರೊಂದಿಗೆ ಪಕ್ಷದ ಮುಂಚೂಣಿ ಘಟಕಗಳ

ಪದಾಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗಿದೆ. ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಚುನಾವಣಾ ಕಣದಲ್ಲಿ ತೊಡಗಲಿದ್ದಾರೆ.

ಕೃಷಿ ಸಚಿವ ಚಲುವರಾಯಸ್ವಾಮಿ, ವಸತಿ ಸಚಿವ ಜಮೀರ್ ಅಹಮದ್ ಖಾನ್ , ಸಚಿವರಾದ ಎಂ.ಬಿ.ಪಾಟೀಲ್ , ವಿನಯ್ ಕುಮಾರ್ ಸೊರಕೆ, ಶಾಸಕರಾದ ಉದಯ್ , ರಂಗನಾಥ್, ಇಕ್ಬಾಲ್ ಹುಸೇನ್, ಬಾಲಕೃಷ್ಣ, ಪುಟ್ಟಣ್ಣ ಸೇರಿದಂತೆ ಪ್ರಮುಖರು ಸಿ.ಪಿ.ಯೋಗೇಶ್ವರ್ ಪರ ಭರ್ಜರಿ ಪ್ರಚಾರ ನಡೆಸುವರು. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಚಾರಕ್ಕೆ ಕರೆತರುವ ಚರ್ಚೆಗಳು ಪಕ್ಷದಲ್ಲಿ ನಡೆದಿವೆ. ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಆಗುವುದಷ್ಟೇ ಬಾಕಿ ಇದೆ.

ಕೈ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ:

ಮಾಜಿ ಸಚಿವ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ಗುಂಪುಗಳ ನಡುವೆ ಭಿನ್ನಮತ ಭುಗಿಲೆದ್ದಿತ್ತು. ಅದು ಎಷ್ಟರ ಮಟ್ಟಿಗೆ ಇತ್ತಂದರೆ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಪ್ರದರ್ಶನಗೊಂಡಿತು. ಆನಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಹಿರಿಯ ನಾಯಕರೊಂದಿಗೆ ಜಿಲ್ಲಾ ಪಂಚಾಯಿತಿವಾರು ಕಾರ್ಯಕರ್ತರ ಸಮನ್ವಯ ಸಭೆ ನಡೆಸಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆಗೆ ಸಜ್ಜಾಗುವಂತೆ ಹುರಿದುಂಬಿಸುವಲ್ಲಿ ಯಶಸ್ವಿಯಾದರು. ಇದೀಗ ಕಾರ್ಯಕರ್ತರ ಒಗ್ಗಟ್ಟು ಯೋಗೇಶ್ವರ್ ಗೆ ಬಲ ತುಂಬಿದೆ.

ಬಾಕ್‌........................

ಕೈ ಸಚಿವರು - ಶಾಸಕರ ಪಟ್ಟಿ

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಜಿ.ಸಿ.ಚಂದ್ರಶೇಖರ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ , ಶಾಸಕ ತನ್ವೀರ್ ಸೇಟ್ , ಕೃಷಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹೆಗಲಿಗೆ ವಹಿಸಲಾಗಿದೆ.

ಇನ್ನು ಬೇವೂರು ಜಿಪಂ ಕ್ಷೇತ್ರ - ಕುಣಿಗಲ್ ಶಾಸಕ ಡಾ.ರಂಗನಾಥ್ , ಹೊಂಗನೂರು ಜಿಪಂ ಕ್ಷೇತ್ರ - ಮಾಜಿ ಶಾಸಕ ರಾಜಣ್ಣ, ಕೋಡಂಬಳ್ಳಿ ಜಿಪಂ ಕ್ಷೇತ್ರ - ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಅಕ್ಕೂರು ಜಿಪಂ ಕ್ಷೇತ್ರ - ವಿಧಾನ ಪರಿಷತ್ ಸದಸ್ಯ ಎಸ್ .ರವಿ, ಮಳೂರು ಜಿಪಂ ಕ್ಷೇತ್ರ - ಮಾಗಡಿ ಶಾಸಕ ಎಚ್ .ಸಿ.ಬಾಲಕೃಷ್ಣ, ನಗರಸಭೆ ವ್ಯಾಪ್ತಿ - ರಾಮನಗರ ಶಾಸಕ ಇಕ್ಬಾಲು ಹುಸೇನ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಇಷ್ಟೇ ಅಲ್ಲದೆ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರದಲ್ಲಿ ವಾರ್ಡ್ ವಾರು ನಾಯಕರನ್ನು ಪ್ರಚಾರಕ್ಕೆ ನಿಯೋಜನೆ ಮಾಡಲಾಗಿದೆ.

(ಮಲ್ಲಿಕಾರ್ಜುನ ಖರ್ಗೆ,ಮಗ್‌ಶಾಟ್‌ ಫೋಟೋ)

ಬಾಕ್ಸ್‌..................

ಪುತ್ರನ ಗೆಲ್ಲಿಸಿಕೊಳ್ಳಲು ತಂದೆಯೇ ಸಾರಥ್ಯ:

ಇನ್ನು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸಾರಥ್ಯ ವಹಿಸಿದ್ದಾರೆ. ಅವರ ಉಮೇದುವಾರಿಕೆ ಸಲ್ಲಿಸುವಾಗ ವಿಪಕ್ಷ ನಾಯಕ ಆರ್.ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಂಸದರಾದ ಬಿ.ವೈ.ರಾಘವೇಂದ್ರ ಸೇರಿದಂತೆ ಪ್ರಮುಖ ಎನ್ ಡಿಎ ನಾಯಕರು ಬೆಂಬಲ ನೀಡಿದ್ದರು. ಈಗ ಕ್ಷೇತ್ರದಲ್ಲಿ ಸಂಸದರಾದ ಯದುವೀರ್, ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಅನೇಕರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕೆ ಇಳಿಯಲಿದ್ದಾರೆ. ಆನಂತರ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಡಾ.ಕೆ.ಸುಧಾಕರ್ ಹಾಗೂ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಕ್ಷೇತ್ರದಲ್ಲಿ ನಿಖಿಲ್ ಪರ ಮತ ಶಿಕಾರಿ ನಡೆಸಲಿದ್ದಾರೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಒಂದೊಂದು ಮತವೂ ನಿರ್ಣಾಯಕ ಆಗಿರುವ ಕಾರಣ ಕೇಂದ್ರ ಸಚಿವ ಕುಮಾರಸ್ವಾಮಿ ಎಲ್ಲ ವರ್ಗದ ಮತಗಳನ್ನು ಸೆಳೆಯಲು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ತಮ್ಮ ಪಕ್ಷದಿಂದ ದೂರ ಸರಿದಿರುವ ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ಪಕ್ಷದಲ್ಲಿನ ಅಲ್ಪಸಂಖ್ಯಾತ ನಾಯಕರಾದ ಜಫ್ರುಲ್ಲಾ ಖಾನ್, ಬಿ.ಎಂ.ಫಾರುಕ್ , ಇಮ್ರಾನ್ ಪಾಷ ಅವರನ್ನು ಬಳಸಿಕೊಂಡು ಮುಸ್ಲಿಮರ ಮತ ಸೆಳೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಆಯಾಯ ಸಮುದಾಯದ ನಾಯಕರನ್ನೇ ಬಳಸಿಕೊಂಡು ಮತಬೇಟೆಗೆ ಪ್ಲಾನ್ ಮಾಡಿಕೊಂಡಿದ್ದಾರೆ.

ಬಾಕ್ಸ್‌..............

ಜೆಡಿಎಸ್ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ:

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ಜೆಡಿಎಸ್ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಯಲ್ಲಿ ಜಿ.ಟಿ.ದೇವೇಗೌಡ ಅವರ ಹೆಸರನ್ನು ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದೆ.

ಎಂ.ಮಲ್ಲೇಶ್ ಬಾಬು, ಸಿ.ಬಿ.ಸುರೇಶ್, ಎಚ್.ಕೆ.ಕುಮಾರಸ್ವಾಮಿ, ಬಂಡೇಪುರ ಕಾಶಂಪೂರ್, ಹನಮಂತಪ್ಪ ವೈ ಅಲ್ಕೋಡ್, ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಎ.ಮಂಜು, ಜಿ.ಡಿ.ಹರೀಶ್ ಗೌಡ, ಶರಣಗೌಡ ಕಂದಕೂರ್ , ಟಿ.ಎ.ಶರವಣ, ಎಸ್.ಎಲ್‌.ಭೋಜೇಗೌಡ, ಸಮೃದ್ಧಿ ಮಂಜುನಾಥ್, ಅನಿತಾ ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು, ಎಂ.ಅಶ್ವಿನ್ ಕುಮಾರ್, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಸೇರಿ 40 ಮಂದಿ ಸ್ಟಾರ್ ಪ್ರಚಾರಕರು ಪಟ್ಟಿಯಲ್ಲಿದ್ದಾರೆ.

(ದೇವೇಗೌಡ ಮಗ್‌ಶಾಟ್‌)

(ಚನ್ನಪಟ್ಟಣ ನಕ್ಷೆ, ಯೋಗೇಶ್ವರ್‌ ಮತ್ತು ನಿಖಿಲ್‌

ಮಗ್‌ಶಾಟ್‌ ಫೋಟೋಸ್‌)

Share this article