ಚಳ್ಳಕೆರೆ: ಮಾದಿಗ ಸಮುದಾಯದ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆ ಚಳ್ಳಕೆರೆ ತಾಲೂಕಿನ ಕಾಲುವೆ ಹಳ್ಳಿಯಲ್ಲಿ ಅಸ್ಪೃಶ್ಯತೆ ಆಚರಣೆ ವಿಜೃಂಭಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಮೂಡಿದೆ.
ಬುಧವಾರ ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಗ್ರಾಮದಲ್ಲಿ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಮಾಡುವ ಶಕ್ತಿಗಳಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಸಂದೇಶ ರವಾನಿಸುದರು.ಕಾಲುವೆಹಳ್ಳಿ ಗ್ರಾಮದಲ್ಲಿ ನಾಯಕ ಹಾಗೂ ಮಾದಿಗ ಸಮುದಾಯಕ್ಕೆ ಸೇರಿದ ಕುಟುಂಬಗಳಿವೆ. ಇದುವರೆಗೂ ಊರಲ್ಲಿ ಒಂದೇ ಕ್ಷೌರದ ಅಂಗಡಿಯಿದ್ದು, ಎಲ್ಲ ಸಮುದಾಯವರು ಅಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ನಾಲ್ಕು ದಿನದ ಹಿಂದೆ ಇದ್ದಕ್ಕಿದ್ದಂತೆ ತಾವು ನಿಮಗೆ ಕ್ಷೌರ ಮಾಡುವುದಿಲ್ಲ, ಊರಿನ ಗೌಡರು, ಗೊಂಚಿಗಾರರು ಹೇಳಿದ್ದಾರೆಂಬ ಸಂಗತಿಯ ಕ್ಷೌರದ ಅಂಗಡಿಯವ ಮಾದಿಗ ಸಮುದಾಯದ ಯುವಕರಿಗೆ ರವಾನಿಸಿದ್ದಾನೆ. ಸಾಲದೆಂಬಂತೆ ಊರಿನ ಪ್ರಮುಖರು ಈ ಸಂಬಂಧ ಮಾದಿಗ ಸಮುದಾಯದ ಯುವಕರಿಗೆ ಧಮಕಿ ಹಾಕಿದ ಆಡಿಯೋ ಎಲ್ಲ ಕಡೆ ವೈರಲ್ ಆಗಿತ್ತು. ನಾವು ಭಾರತದಲ್ಲಿ ಇದ್ದೇವೆ. ಎಲ್ಲರಿಗೂ ಇಲ್ಲಿ ಒಂದೇ ಕಾನೂನು. ಪ್ರತ್ಯೇಕ ಕ್ಷೌರದ ಅಂಗಡಿ ಬಗ್ಗೆ ಮಾತನಾಡಬೇಡಿ ಎಂದು ಮಾದಿಗ ಸಮುದಾಯದ ಯುವಕರು ಬೇಡಿಕೊಳ್ಳುವ ಆಡಿಯೋ ಅದಾಗಿದ್ದು, ಎಲ್ಲ ಕಡೆ ಹರಿದಾಡಿದೆ. ಸಾಲದೆಂಬಂತೆ ಯುವಕರು ತಾಲೂಕು ಕೇಂದ್ರಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ಷೌರ ನಿರಾಕರಣೆ ಮಾಡುವುದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದರು. ಕ್ಷೌರಮಾಡಲು ನಿರಾಕರಿಸಿದ ಪ್ರಕರಣ ವರದಿಯಾದ ಬೆನ್ನೆಲ್ಲೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಗ್ರಾಮದಲ್ಲಿ ಸಭೆ ನಡೆಸಿ ಅಸ್ಪೃಶ್ಯತೆ, ಅಸಮಾನತೆಯನ್ನು ಹುಟ್ಟುಹಾಕುವ ಶಕ್ತಿಗಳಿಗೆ ಬುಧವಾರ ಎಚ್ಚರಿಕೆ ನೀಡಿದರು. ಯಾವುದೇ ಕಾರಣಕ್ಕೂ ಜಾತಿಯ ವಿಷಬೀಜ ಬಿತ್ತಿ ದಲಿತ ಸಮುದಾಯಕ್ಕೆ ಅನ್ಯಾಯ, ಅವಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಯಾವುದೇ ಸಣ್ಣ, ಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಗ್ರಾಮಸ್ಥರೇ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬೇಕು. ಆದರೆ, ನೀವು ಕಾನೂನು ವಿರುದ್ಧವಾಗಿ, ಸಂವಿಧಾನಾತ್ಮಕವಾದ ಹಕ್ಕನ್ನು ನೀಡದೆ ವಂಚಿಸುವುದು ಸರಿಯಲ್ಲ. ಇದು ಘೋರ ಅಪರಾಧವಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಸಮಾನತೆಯ ಜೀವನವನ್ನು ನಡೆಸಲು ಮುಂದಾಗಿ ಎಂದು ಹೇಳಿದರು. ಗ್ರಾಮದ ಮುಖಂಡರಾದ ಕಾಲುವೇಹಳ್ಳಿ ಶ್ರೀನಿವಾಸ್, ಜಯಪಾಲಯ್ಯ, ದಲಿತ ಸಂಘಟನೆಗಳ ಮುಖಂಡರಾದ ಟಿ.ವಿಜಯಕುಮಾರ್, ಹೊನ್ನೂರುಸ್ವಾಮಿ, ಚನ್ನಗಾನಹಳ್ಳಿ ಮಲ್ಲೇಶ್, ಮೊರಾರ್ಜಿ, ನಾಗರಾಜು, ಬಸವರಾಜು, ತಹಸೀಲ್ದಾರ್ ರೇಹಾನ್‌ಪಾಷ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ತಳಕು ವೃತ್ತ ನಿರೀಕ್ಷಕ ಹನುಮಂತಪ್ಪಸಿರಿಹಳ್ಳಿ, ಪಿಎಸ್‌ಐ ಲೋಕೇಶ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.