ಹಾವೇರಿ: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ರಾಜ್ಯ ಹಿಂದುಳಿದ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಸ್ಟರ್ ಟ್ರೇನರ್‌ಗಳು ಹಾಗೂ ಗಣತಿದಾರರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದ ಹುಕ್ಕೇರಿಮಠ ಶಾಲೆಯಲ್ಲಿ ಶನಿವಾರ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ತರಬೇತಿ ಕಾರ್ಯದಲ್ಲಿ ಮಾತನಾಡಿದರು.ರಾಜ್ಯ ಸರ್ಕಾರ ಆದೇಶದಂತೆ ಸೆ. 22ರಿಂದ ಅ. 7ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ರಾಜ್ಯಾದ್ಯಂತ ಮನೆ- ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ಅಗತ್ಯ ಕೈಪಿಡಿ ಮತ್ತು ಆ್ಯಪ್ ನೀಡಲಾಗುತ್ತದೆ ಎಂದರು. ಜಿಲ್ಲಾದ್ಯಂತ ಎಲ್ಲ ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ಶಾಲಾ ಅವಧಿ ಹೊರತುಪಡಿಸಿ ರಜಾ ಅವಧಿಯಲ್ಲಿ ಇಂತಿಷ್ಟು ಗಣತಿದಾರಿಗೆ ಒಂದು ಗುಂಪು ಮಾಡಿ ಸಮೀಕ್ಷೆ ಕೈಗೊಂಡು ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಈಗಾಗಲೇ ಹೆಸ್ಕಾಂ ಇಲಾಖೆಯವರಿಂದ ವಿದ್ಯುತ್ ಮೀಟರ್‌ಗಳಿಗೆ ರೀಡರ್‌ಗಳ ಮೂಲಕ ಜಿಯೋ ಟ್ಯಾಗ್ ಅಳವಡಿಸಿ ಮನೆಗೆ ಯುಎಚ್ ನಂಬರ್ ಅಳವಡಿಸಲಾಗಿದೆ. ಪ್ರತಿ ಗಣತಿದಾರರು ಸಮಾರು 150 ಮನೆಗಳಿಗೆ ಸಮೀಕ್ಷೆ ಮಾಡಬೇಕಾಗಿದೆ. ಈ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಸಲು ಈಗಾಗಲೇ ಆಶಾ ಕಾರ್ಯಕರ್ತೆಯರು ಹಾಗೂ ಎನ್ಎಸ್‌ಎಸ್ ಅವರು ಗಣತಿದಾರರು ಕೇಳುವ 60 ಪ್ರಶ್ನೆಗಳ ಪ್ರತಿ ತೆಗೆದುಕೊಂಡು ಎಲ್ಲ ಮನೆಗಳಿಗೆ ತೆರಳಿ ಸಮೀಕ್ಷೆಯ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿಯು ನಡೆಯುತ್ತದೆ. 2011ರ ನಂತರ ಯಾವುದೇ ಗಣತಿಯೂ ಆಗಲಿಲ್ಲ. ಹೀಗಾಗಿ ಸರ್ಕಾರ ಎಲ್ಲ ಇಲಾಖೆಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸುವುದಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಸಮೀಕ್ಷೆಯು ಆ್ಯಪ್ ಮೂಲಕ ಪ್ರತಿ ಕುಟುಂಬದ ಮಾಹಿತಿಯನ್ನು, ದತ್ತಾಂಶಗಳನ್ನು ಗಣತಿ ಮೂಲಕ ಸಂಗ್ರಹ ಮಾಡಲಾಗುವುದು. ಇಲ್ಲಿ ತಿದ್ದುಪಡಿಗೆ ಅವಕಾಶ ಇರುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸುಬ್ರಾ ನಾಯ್ಕ, ತಹಸೀಲ್ದಾರ್ ಶರಣಮ್ಮ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಪಾಟೀಲ್ ಇದ್ದರು.