ಉಡುಪಿ: ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ

KannadaprabhaNewsNetwork | Published : Jun 6, 2024 12:32 AM

ಸಾರಾಂಶ

ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಜರುಗಿತು. ನಮ್ಮ ಹಿರಿಯರು ಪ್ರಕೃತಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ಉರಗ ತಜ್ಞ ಗುರುರಾಜ್‌ ಸನಿಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಉಡುಪಿಯ ‘ನಮ್ಮ ಮನೆ - ನಮ್ಮ ಮರ’ ತಂಡ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಾಹೆಯ ಎಂ.ಐ.ಟಿ.ಯ ಎನ್.ಎಸ್.ಎಸ್. ವಿಭಾಗಗಳ ಜಂಟಿ ಸಹಭಾಗಿತ್ವದಲ್ಲಿ ಪ್ರಗತಿನಗರದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಬುಧವಾರ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉರಗ ತಜ್ಞ ಗುರುರಾಜ್ ಸನಿಲ್, ನಮ್ಮ ಹಿರಿಯರು ಪ್ರಕೃತಿಗೆ ಅಪಾರ ಕೊಡುಗೆ ನೀಡಿದ್ದರು. ನಾಗಬನಗಳ ಮೂಲಕ ಪರಿಸರ ಉಳಿಸುವ ಕಾರ್ಯ ನಿರಂತರ ಮಾಡಿದ್ದರು. ಆದರೆ ಇಂದು ವಿವಿಧ ಕಾರಣಗಳನ್ನು ನೀಡಿ ಪರಿಸರ ನಾಶ ಮಾಡಲಾಗುತ್ತಿರುವುದು ದುರದೃಷ್ಟ. ನಾವೆಲ್ಲರೂ ಹೆಚ್ಚಿನ ಸಂಖ್ಯೆಗಳಲ್ಲಿ ಗಿಡ ನೆಟ್ಟು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ ಅವರು ಮಾತನಾಡಿ ನಮ್ಮ ಇಲಾಖೆಯ ಆವರಣದಲ್ಲಿ ಗಿಡ ನೆಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಇದನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಿಡಗಳನ್ನು ಈ ಪರಿಸರದಲ್ಲಿ ನೆಡುತ್ತೇವೆ ಎಂದರು.

ಎಂ.ಐ.ಟಿ ಮಣಿಪಾಲದ ನಿರ್ದೇಶಕ ಕಾಂ. ಅನಿಲ್ ರಾಣಾ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಂ.ಐ.ಟಿ ಮಣಿಪಾಲದ ಜಂಟಿ ನಿರ್ದೇಶಕ ಡಾ. ಸೋಮಶೇಖರ್ ಭಟ್, ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್, ಪ್ರಬಂಧಕ ರಾಮದಾಸ್, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಬಾಲಕೃಷ್ಣ ಮದ್ದೋಡಿ, ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಲ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಕಲಾವಿದೆ ಪದ್ಮಾಸಿನಿ ಉದ್ಯಾವರ ಮುಂತಾದವರಿದ್ದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Share this article