ಬಂಡೆಗಳಲ್ಲಿ ಚಿತ್ರ ಬಿಡಿಸುವ ಮೂಲಕ ಪರಿಸರ ಜಾಗೃತಿ!

KannadaprabhaNewsNetwork |  
Published : May 18, 2024, 12:34 AM IST
ಪೈಂಟ್‌ | Kannada Prabha

ಸಾರಾಂಶ

ಮಾಳದ ಸಂತೋಷ್ ಹಾಗೂ ಅವರ ತಂಡ ನೈಸರ್ಗಿಕ ಬಣ್ಣಗಳನ್ನು ಬಳಸಿ ಮೀನು, ಆಮೆ, ಜಲಚರಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣೆಯ ಮಾಹಿತಿ, ಭಿತ್ತಿಚಿತ್ರಗಳನ್ನು ಅಂಟಿಸಿ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಪಶ್ಚಿಮ ಘಟ್ಟಗಳ ಸಾಲಿನ ನದಿ ತೀರದ ಪ್ರದೇಶಗಳಲ್ಲಿ ಸ್ಥಳೀಯರು, ಪ್ರವಾಸಿಗರು ಪ್ಲಾಸ್ಟಿಕ್ ಹಾಗೂ ಬಿಯರ್ ಬಾಟಲಿಗಳನ್ನು ಹಾಕಿ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಇದನ್ನರಿತ ಮೂಡುಬಿದಿರೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್ ನೇತೃತ್ವದಲ್ಲಿ ಪರಿಸರ ಉಳಿಸಿ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.* ನದಿ ಸ್ವಚ್ಛತಾ ಆಂದೋಲನ:

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿಯುವ ನದಿಗಳ ದಡಗಳಲ್ಲಿ ಪ್ಲಾಸ್ಟಿಕ್, ಬಿಯರ್ ಬಾಟಲಿಗಳ ತ್ಯಾಜ್ಯ ಹೆಚ್ಚುತ್ತಿದ್ದು, ಇದನ್ನರಿತ ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳ ತಂಡ, ಮಾಳದ ಖ್ಯಾತ ಚಿತ್ರಕಾರ ಸಂತೋಷ ಮಾಳ ಹಾಗೂ ಹಾಗೂ ವಿಷ್ಣುಮೂರ್ತಿ ಬಳಗದ ಸದಸ್ಯರು ಒಟ್ಟಾಗಿ ಮಾಳದ ದೇವರಗುಂಡಿ ಪ್ರದೇಶಕ್ಕೆ ತೆರಳಿ ಹತ್ತು ಚೀಲ ಪ್ಲಾಸ್ಟಿಕ್ ಹಾಗೂ 200ಕ್ಕೂ ಹೆಚ್ಚು ಬಿಯರ್ ಬಾಟಲಿಗಳನ್ನು ಹೊರ ತೆಗೆದು ಸ್ವಚ್ಛಗೊಳಿಸಿದ್ದಾರೆ.

* ಚಿತ್ರ ಬಿಡಿಸಿ ಅರಿವು: ಅರಣ್ಯ ಇಲಾಖೆ ನೇತೃತ್ವದಲ್ಲಿ ಚಿತ್ರಕಾರ ಮಾಳದ ಸಂತೋಷ್ ಹಾಗೂ ಅವರ ತಂಡ ಬಂಡೆಗಲ್ಲಿನ ಮೇಲೆ ಚಿತ್ರ ಬಿಡಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ನೈಸರ್ಗಿಕ ಬಣ್ಣಗಳನ್ನು ಬಳಸಿ ಮೀನು, ಆಮೆ, ಜಲಚರಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣೆಯ ಮಾಹಿತಿ, ಭಿತ್ತಿಚಿತ್ರಗಳನ್ನು ಅಂಟಿಸಿ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ.

ಸಂಜೀವ, ಭೋಜ, ಮನೋಜ್, ಶ್ರೀಧರ್, ಸುಧೀರ್, ಮನ್ಮಥ, ಗಣೇಶ್, ಪ್ರದೀಪ್, ಭವೀಷ್ ಸಹಕಾರ ನೀಡಿದ್ದಾರೆ.

* ಕಲಾವಿದನ ಕೈಚಳಕಕ್ಕೆ ಜನರು ಖುಷ್:

ಕಾರ್ಕಳ ತಾಲೂಕಿನ ಮಾಳದ ಖ್ಯಾತ ಚಿತ್ರ ಕಲಾವಿದ ಸಂತೋಷ್, ಬಂಡೆಗಲ್ಲಿನ ಮೇಲೆ ನಿರ್ಮಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಮೈಸೂರಿನ ದಸರಾದಲ್ಲಿ ಇವರು ರಚಿಸಿದ ಸ್ತಬ್ಧಚಿತ್ರವು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿತ್ತು. ಬೆಂಗಳೂರಿನ ಲಲಿತಕಲಾ ಅಕಾಡೆಮಿಯಲ್ಲಿ ಇವರು ರಚಿಸಿದ ಚಿತ್ರಗಳು ಪ್ರದರ್ಶನ ಗೊಂಡಿವೆ.--------ನೈಸರ್ಗಿಕ ಬಣ್ಣಗಳಿಂದ ಜಲಚರಗಳ ಚಿತ್ರಗಳನ್ನು ರಚಿಸಲಾಗಿದೆ. ಅರಣ್ಯ ಇಲಾಖೆ ಸಾಥ್ ನೀಡಿದೆ. ಬಂಡೆ ಕಲ್ಲಿನ ಮೇಲೆ ಚಿತ್ರಿಸುವುದು ಒಂದು ಹೊಸ ಅನುಭವ. ನೀರಿನ ಹತ್ತಿರ ಇರುವ ಬಂಡೆಯಲ್ಲಿ ಚಿತ್ರ ಬಿಡಿಸಿದ್ದರಿಂದ ಕೆಲವೊಮ್ಮೆ ಈಜಾಡಿಕೊಂಡು ಬಿದ್ದು ಬಣ್ಣ ಬಳಿದದ್ದು ಇದೆ. ಚಿತ್ರದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳ ಬಗ್ಗೆ ಅರಿವನ್ನು ಮೂಡಿಸುವುದು ನನ್ನ ಉದ್ದೇಶವಾಗಿದೆ.

। ಸಂತೋಷ ಮಾಳ, ಚಿತ್ರಗಾರ

-------------ವಿಲಾಸಿ ಜೀವನಕ್ಕಾಗಿ ಪರಿಸರ ಹಾಳುಗೆಡವುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಅರಣ್ಯ ಇಲಾಖೆ ಪರಿಸರ ಉಳಿವಿಗಾಗಿ ಬಂಡೆಗಲ್ಲಿನ ಮೇಲೆ ಚಿತ್ರಗಳ ನಿರ್ಮಾಣ ಮಾಡಲು ವಿನೂತನ ಪ್ರಯತ್ನ ಮಾಡಿದೆ. ನಮ್ಮ ಪರಿಸರ ಉಳಿಸಬೇಕು‌‌. ಪರಿಸರವನ್ನು ಪ್ರೀತಿಸಿ ನಾಳೆಗಾಗಿ ಪರಿಸರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.। ಜಿ.ಡಿ. ದಿನೇಶ್, ವಲಯ ಅರಣ್ಯಾಧಿಕಾರಿಗಳು ಮೂಡುಬಿದಿರೆ ವಲಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ದಾಳಿಗೆ ಸೋಲಾರ್‌ ತಂತಿ ಬೇಲಿ ಹಾನಿ
ದೀಪ ಬೆಳಗಿ ಮನೆ-ಮನದ ಕತ್ತಲನ್ನು ಹೋಗಲಾಡಿಸಿ: ಕಮಲಾಕ್ಷಿ