ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಅಮೀನಗಡಇದುವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಅವರ ಭವಿಷ್ಯ ಪೋಷಣೆ ಮಾಡಿದ್ದ ಇಲ್ಲಿನ ಶಿಕ್ಷಕರೊಬ್ಬರು ಈಗ ಭೂಮಿಯನ್ನು ತಂಪಾಗಿಸಲು ಗಿಡಗಳನ್ನು ಪೋಷಿಸುವ ಮೂಲಕ ಪರಿಸರ ಕಾಳಜಿಯನ್ನೂ ಮಾಡುತ್ತಿದ್ದಾರೆ.
ಪಟ್ಟಣದ ನಿವೃತ್ತ ಪ್ರೌಢಶಾಲಾ ಶಿಕ್ಷಕ ಬಸವರಾಜ ಕಂಠಿ ಈಗ ನಿವೃತ್ತ ಶಿಕ್ಷಕ. ತಮ್ಮ ಸ್ವಂತ ಖರ್ಚಿನಲ್ಲಿಯೇ ನೂರಾರು ಗಿಡಗಳನ್ನು ತಾವೇ ನೆಟ್ಟು, ಅವುಗಳ ಪೋಷಣೆ ಪಾಲನೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮಿಂದ ಪರಿಸರಕ್ಕೂ ಸಹಾಯ ಮಾಡುತ್ತಿದ್ದಾರೆ. ಹುನಗುಂದ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಜಮೀನಿನ ಖಾಲಿಜಾಗದಲ್ಲಿ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಹತ್ತಾರು ಗಿಡಗಳನ್ನು ತಂದು ನೆಟ್ಟು ಪೋಷಿಸುತ್ತಾ ಬಂದಿದ್ದಾರೆ.ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಬಾದವಾಡಗಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, 2023ರಲ್ಲಿ ನಿವೃತ್ತರಾಗಿದ್ದಾರೆ. ವೃತ್ತಿಯಿಂದ ಬಿಡುಗಡೆಯಾದರೂ ಪ್ರವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಸ್ವಂತ ಜಾಗ, ಶಾಲೆಯ ಜಾಗ ಸೇರಿದಂತೆ ಹಲವಾರು ಜಾಗಗಳಲ್ಲಿ ಅವರು ಗಿಡಮರಗಳನ್ನು ಬೆಳೆಸುತ್ತಿದ್ದಾರೆ. ಜತೆಗೆ ಬೇಸಿಗೆ ಸಂದರ್ಭದಲ್ಲಿಯೂ ಸ್ವಂತ ಹಣದಿಂದ ಅವುಗಳಿಗೆ ನೀರು ಹಾಕಿಸುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ನಿವೃತ್ತ ಶಿಕ್ಷಕ ಬಸವರಾಜ ಕಂಠಿ, ಹಿರೇಬಾದವಾಡಗಿ ಪ್ರೌಢಶಾಲೆಯಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಶಾಲಾ ವಾತಾವರಣವನ್ನು ಹಚ್ಚಹಸಿರಾಗಿಸಿದ್ದೆವು. ನಿವೃತ್ತನಾದ ನಂತರ ನನಗೆ ಅದೇ ಪ್ರೇರಣೆಯಾಯಿತು. ಅಂದಿನಿಂದಲೂ ಈ ಕಾರ್ಯವನ್ನು ನಿರಂತರ ಮಾಡುತ್ತಿದ್ದೇನೆ ಎಂದಿದ್ದಾರೆ.ಪ್ರತಿವರ್ಷ ಭೂಮಿಯ ತಾಪಮಾನ ಹೆಚ್ಚುತ್ತಾ ಹೋಯಿತು. ಅಧಿಕ ತಾಪಮಾನದಿಂದ ಜನ, ಜಾನುವಾರುಗಳು ಹೈರಾಣಾಗುವುದನ್ನು ಕಾಣುತ್ತಿದ್ದೆ. ಇದಕ್ಕೆ ನಾನೇನು ಮಾಡಬೇಕು ಎಂದು ಪರಿತಪಿಸುತ್ತಿದ್ದಾಗ, ನನಗೆ ಹೊಳೆದದ್ದೇ ಗಿಡಮರಗಳನ್ನು ಹೆಚ್ಚು ಬೆಳೆಸುವ ಆಲೋಚನೆ. ಈ ಮೂಲಕ ಪರಿಸರ ಸಂರಕ್ಷಿಸಿದರೆ ಮುಂದಿನ ಪೀಳಿಗೆಗಾದರೂ ಅನುಕೂಲವಾಗುತ್ತದೆ ಎಂಬ ಧೃಢನಿರ್ಧಾರದಿಂದ ವಿವಿಧೆಡೆಗಳಿಂದ ಬೇವು, ಅರಳಿ, ಕೇರಿ, ಅಶೋಕ, ಬಸರಿ ಮುಂತಾದ ಸಸಿಗಳನ್ನು ತಂದು ನೆಡುವುದರ ಜೊತೆಗೆ ನನ್ನ ಸ್ವಂತ ಖರ್ಚಿನಿಂದ ಟ್ಯಾಂಕರ್‌ಗಳ ಮೂಲಕ ನೀರುಹಾಯಿಸಿದೆ.
ಮಾತ್ರವಲ್ಲ, ಆ ಗಿಡಗಳು ದನಕರುಗಳು ಹಾಳುಗೆಡವದಂತೆ ಅದರ ಪಾಲನೆ ಪೋಷಣೆಯನ್ನೂ ಮಾಡುತ್ತಿದ್ದೇನೆ. ಈ ವರ್ಷದ ಪ್ರಸ್ತುತ ಪರಿಸರ ದಿನಾಚರಣೆ ನಿಮಿತ್ತ ಹತ್ತು ಸಸಿಗೆಳನ್ನು ಸಿದ್ದನಕೊಳ್ಳದಿಂದ ತಂದು ನೆಟ್ಟಿದ್ದೇನೆ. ಮುಂದಿನ ದಿನಮಾನಗಳಲ್ಲಿ ಭೂಮಿಯ ತಾಪಮಾನ ಕಡಿಮೆಯಾಗಿ ಅನುಕೂಲವಾದರೆ ನನ್ನ ಶ್ರಮ ಸಾರ್ಥಕವಾಗುತ್ತದೆ ಎಂದು ತಮ್ಮ ಕೆಲಸದ ಬಗ್ಗೆ ಹೇಳಿಕೊಂಡರು.-------------
ಕೋಟ್....ನಿವೃತ್ತ ಜೀವನ ಆರಾಮವಾಗಿ ಕಳೆಯಬೇಕಾದ ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕ ಬಸವರಾಜ ಕಂಠಿಯವರು, ಪರಿಸರ ಸಂರಕ್ಷಣೆಗೆ ಮುಂದಾಗಿರುವುದು, ಸೇವಾ ಮನೋಭಾವ ಹೊಂದಿರುವುದು ನಮಗೆಲ್ಲ ಮಾದರಿ. ಇಂದಿನ ಯುವಜನಾಂಗಕ್ಕೆ ಇವರು ಸ್ಫೂರ್ತಿ
- ಮಲ್ಲಿಕಾರ್ಜುನ ಸಜ್ಜನ, ತಾಲೂಕು ಕಸಾಪ ಅಧ್ಯಕ್ಷ------------