ಜಲಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಬಹುತೇಕ ಯಶಸ್ಸು ಸಾಧಿಸಿದೆ ಎಂದು ಗಣ್ಯರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ನಿರಂತರ ಕಾರ್ಯಕ್ರಮಗಳ ಮೂಲಕ ನದಿ ಜಲಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಬಹುತೇಕ ಯಶಸ್ಸು ಸಾಧಿಸಿದೆ ಎಂದು ಕುಶಾಲನಗರ ಪುರಸಭೆ ಸದಸ್ಯರು ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ವಿ ಎಸ್ ಆನಂದ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಗೆಳೆಯರ ಬಳಗ ಮತ್ತು ಕುಶಾಲನಗರ ಮಾಜಿ ಸೈನಿಕರ ಸಂಘದ ಸಹಯೋಗದೊಂದಿಗೆ ನಡೆದ 178ನೇಯ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಹಲವು ಕಾರಣಗಳಿಂದ ನದಿ ನೀರು ನೇರವಾಗಿ ಕಲುಷಿತ ಗೊಳ್ಳುತ್ತಿದ್ದು ಅದನ್ನು ತಪ್ಪಿಸುವಲ್ಲಿ ಸಮಿತಿ ಮೂಲಕ ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಪ್ರತಿಯೊಬ್ಬರೂ ನದಿ ಪರಿಸರ ಬಗ್ಗೆ ಕಾಳಜಿ ಹೊಂದಬೇಕು. ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಸಂರಕ್ಷಣೆ ಸಂಬಂಧ ಪುರಸಭೆ ಮೂಲಕ ಕ್ರಿಯಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸುಬೇದಾರ್ ಮೇಜರ್ ಎಸ್ ಆರ್ ಮಾದಪ್ಪ ಮಾತನಾಡಿ, ತಮ್ಮ ಸಂಘದ ಮೂಲಕ ನದಿ ಸ್ವಚ್ಛತಾ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.ಇದೇ ಸಂದರ್ಭ ಅಕ್ಟೋಬರ್ ತಿಂಗಳ 24ರಿಂದ ಆರಂಭಗೊಳ್ಳಲಿರುವ 15ನೇ ವರ್ಷದ ತಲಕಾವೇರಿ-ಪೂಂಪ್ ಹಾರ್ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ಗೆಳೆಯರ ಬಳಗದ ಪ್ರಮುಖರಾದ ಎಂ ಎಸ್ ರಾಜೇಶ್, ಜಯಪ್ರಕಾಶ್, ನರೇಂದ್ರ, ಆಯೂಬ್, ಪ್ಯಾರಡೈಸ್ ರವಿ, ಇಬ್ರಾಹಿಂ, ತೇಜ, ವಿಮಲ್ ಜೈನ್, ಹಮೀದ್, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಸುಬೇದಾರ್ ಎಳ್ತಂಡ ರಂಜಿತ್, ಜೆ ಪಿ ನರೇಶ್ ಕುಮಾರ್, ಸುಬೇದಾರ್ ಮೇಜರ್ ಕೆ ಎಂ ಸೋಮಯ್ಯ, ಎನ್ ಎಸ್ ಕರುಂಬಯ್ಯ, ಎಸ್ ಎಂ ತಮ್ಮಯ್ಯ, ಎಳ್ತಂಡ ಕಾವೇರಪ್ಪ, ಮೀನಾಕ್ಷಿ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್, ಧರಣಿ ಚೈತನ್ಯ, ವೈಶಾಖ್, ಪ್ರವೀಣ್ ಮತ್ತು ಬಳಗದ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.