ಹುಬ್ಬಳ್ಳಿ:
ಪರಿಸರ ರಕ್ಷಣೆ ಮಾಡದೇ ಇದ್ದಲ್ಲಿ ಮುಂದೆ ಅಕ್ಕಪಕ್ಕದ ದೇಶ, ಅನ್ಯ ರಾಜ್ಯಗಳೊಂದಿಗೆ ಹೊಡೆದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಆತಂಕ ವ್ಯಕ್ತಪಡಿಸಿದರು. ಅವರು ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿನ ತೋಳನಕೆರೆಯ ಮುಖ್ಯದ್ವಾರದಿಂದ ಭಾನುವಾರ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿಕೇರ್ ಫೌಂಡೇಶನ್, ವಸುಂಧರಾ ಫೌಂಡೇಶನ್ ಹಾಗೂ ಸ್ಕೆಟೌನ್ ಗ್ರೂಪ್ ವತಿಯಿಂದ ನಡೆದ ರನ್ ಫಾರ್ ನೇಚರ್ ಓಟದಲ್ಲಿ ಪಾಲ್ಗೊಂಡು ಮಾತನಾಡಿದರು.ಕಾರ್ಗಿಲ್ ಯುದ್ಧದಲ್ಲಿ ದೇಶದ 527 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ದಿನದಂದು ನಗರದ ಒಂದೆಡೆ ದೇಶಪ್ರೇಮಿಗಳೆಲ್ಲ ಸೇರಿ ಹುತಾತ್ಮರ ಹೆಸರಿನಲ್ಲಿ 527 ದೀಪ ಬೆಳಗಿಸುವ ಮೂಲಕ ಹುತಾತ್ಮ ಯೋಧರ ಸ್ಮರಿಸುವ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯಕ ಮಾತನಾಡಿ, ಪರಿಸರ ಇಂದು ವಿನಾಶದ ಅಂಚಿಗೆ ತಲುಪುತ್ತಿದೆ. ಈ ಕುರಿತು ಜಾಗೃತಿ ವಹಿಸಬೇಕಾದ ಜನರೇ ಇಂದು ನಿಷ್ಕಾಳಜಿ ತೋರುತ್ತಿರುವುದು ಸರಿಯಲ್ಲ. ಈ ಹಿಂದೆ 55 ಲಕ್ಷ ಸಸ್ಯ ಸಂಪತ್ತು ಹೊಂದಿದ್ದ ಕರ್ನಾಟಕದಲ್ಲಿ ಇಂದು 45 ಸಾವಿರ ಸಸ್ಯ ಸಂಪತ್ತು ಉಳಿದಿವೆ ಎಂದರೆ ಪರಿಸರ ಹೇಗೆ ಅವನತಿಯತ್ತ ಹೊರಟಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.ಗಿಡ-ಮರ ಕಡಿಯುವುದರಿಂದ ಪರಿಸರದಲ್ಲಿ ಬದಲಾವಣೆಗೆ ಕಾರಣವಾಗಲಿದೆ. ಮಳೆ ಪ್ರಮಾಣ ಇಳಿಕೆ, ಉಷ್ಣಾಂಶ ಏರಿಕೆಯಾಗಿದೆ. ಈಗಾಗಲೇ ಶೇ. 26ರಿಂದ 28ರ ವರೆಗೆ ಮಳೆ ಪ್ರಮಾಣ ಕಡಿಮೆಯಾದರೆ, ಶೇ. 2ರಷ್ಟು ಉಷ್ಣಾಂಶ ಏರಿಕೆಯಾಗಿದೆ. ಇದೇ ರೀತಿ ಮುಂದುವರಿದಲ್ಲಿ ಪರಿಸರದೊಂದಿಗೆ ಮಾನವನ ಅವನತಿಯಾಗಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಉತ್ತಮ ಮಳೆಯಾಗಬೇಕಾದರೆ ಗಿಡ-ಮರಗಳನ್ನು ನಮ್ಮ ಮಕ್ಕಳಂತೆ ಪೋಷಿಸಿ ಬೆಳೆಸುವಂತೆ ಕರೆ ನೀಡಿದರು.
ಮೇಯರ್ ವೀಣಾ ಬರದ್ವಾಡ ಮಾತನಾಡಿ, ಪಾಲಿಕೆಯಿಂದ ಈ ವರ್ಷ ಒಂದು ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದ್ದು, ಆದಷ್ಟು ಶೀಘ್ರವೇ ಇದಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ಮಾತನಾಡಿದರು. ಇದೇ ವೇಳೆ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯಕ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ವೀಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ಪ್ರೊ. ಎಂ.ಆರ್. ಪಾಟೀಲ, ಎಸ್.ಸಿ. ಫೌಂಡೇಶನ್‌ನ ವಿನಯ ಹಿರೇಮಠ, ಶಂಕರ ಹೊಸಮನಿ ಸೇರಿದಂತೆ ಹಲವರಿದ್ದರು. ಆರ್‌ಜೆ ರಷೀದ ನಿರೂಪಿಸಿದರು. ಪ್ರಿಯಾ ಗುಜಮಾಗಡಿ ಸ್ವಾಗತಿಸಿದರು. ರನ್ ಫಾರ್ ನೇಚರ್‌ಗೆ ಚಾಲನೆ:
ಇಲ್ಲಿನ ತೋಳನಕೆರೆ ಮುಖ್ಯದ್ವಾರದಿಂದ ನಡೆದ ರನ್ ಫಾರ್ ನೇಚರ್ ಓಟಕ್ಕೆ ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ್ ಚಾಲನೆ ನೀಡಿದರು. ಸಾವಿರಾರು ವಿದ್ಯಾರ್ಥಿಗಳು, ಮುದ್ದು ಮಕ್ಳಳು, ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.