ಧಾರವಾಡ:
ಪರಿಸರದ ವಿಷಯದಲ್ಲಿ ಸಮಾಜ ಮತ್ತಷ್ಟು ಜಾಗೃತವಾಗಲಿ ಎಂಬ ಉದ್ದೇಶದಿಂದ ಪರಿಸರ ಜಾಥಾ ಮಾಡಲಾಗುತ್ತಿದೆ ಎಂದು ಶಿಕ್ಷಣ ಚಿಂತಕ ಮಲ್ಲಿಕಾರ್ಜುನ ಚಿಕ್ಕಮಠ ಹೇಳಿದರು.ಗುಬ್ಬಚ್ಚಿ ಗೂಡು ಶಾಲೆಯ ಮಕ್ಕಳು ಪರಿಸರ ದಿನಾಚರಣೆ ಅಂಗವಾಗಿ `ಪರಿಸರ ರಕ್ಷಣೆ ಕಡೆಗೆ ನಮ್ಮ ನಡಿಗೆ’ ಮಕ್ಕಳ ಜಾಥಾಕ್ಕೆ ಭಾನುವಾರ ಚಾಲನೆ ನೀಡಿದ ಅವರು, ಪರಿಸರ ಅಂದರೆ ಬರೀ ಗಿಡ-ಮರಗಳಲ್ಲ. ನಮ್ಮ ಸುತ್ತಲೂ ಕಾಣುತ್ತಿರುವುದೆಲ್ಲವೂ ಪರಿಸರ. ಭೂಮಿ, ಆಕಾಶ, ಸಮುದ್ರ, ಜಲಚರಗಳು, ಕೀಟಗಳು, ಪ್ರಾಣಿಗಳು ಇವೆಲ್ಲವೂ ಪರಿಸರದ ಭಾಗಗಳು. ಅವುಗಳನ್ನು ಬಳಸಿಕೊಳ್ಳತ್ತಲೇ ರಕ್ಷಿಸುವತ್ತಲೂ ಕಾರ್ಯ ಮಾಡಬೇಕೆಂದರು.
ಪರಿಸರ ಜಾಥಾ ಒಂದು ಕಾಲಕ್ಕೆ ಇರಲೇ ಇಲ್ಲ. ಆಚರಣೆಗಳು ಯಾವಾಗ ಬರುತ್ತವೆ ಎಂದರೆ ನಾವು ಹಾದಿ ತಪ್ಪುತ್ತಿದ್ದೇವೆ. ಸರಿದಾರಿಯಲ್ಲಿ ನಡೆಯಬೇಕು ಎಂದು ಜಾಗೃತಿ ಮೂಡಿಸಲು ಆಚರಣೆಗಳು ಬರಲು ಶುರುವಾಗುತ್ತವೆ. 145 ಕೋಟಿಗೂ ಮೀರಿದ ಜನಸಂಖ್ಯೆಯಿಂದಲೇ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಭೂಮಿ ಇರುವುದಷ್ಟೇ. ಇದ್ದ ಭೂಮಿಯಲ್ಲಿಯೇ ಎಲ್ಲರೂ ಇರಬೇಕಾಗಿದೆ. ನಮಗೆ ಅವಶ್ಯಕತೆಗಳು ಹೆಚ್ಚಾಗುತ್ತ ಹೊರಡುತ್ತವೆ. ಹೀಗಾಗಿ ಹಾದಿ ತಪ್ಪಿ ನಡೆಯಲು ಪ್ರಾರಂಭಿಸಲಾಗುತ್ತದೆ. ಮಾಲಿನ್ಯ ಇಂದು ಹೆಚ್ಚಾಗುತ್ತಾ ನಡೆದಿದೆ. ಈ ಬಯಕೆ, ನಮ್ಮ ಮಿತಿಯೊಳಗೆ ಇಟ್ಟುಕೊಳ್ಳಬೇಕಾಗಿದೆ. ಅಂದಾಗ ಮಾತ್ರ ಪರಿಸರ ರಕ್ಷಿಸಲು ಸಾಧ್ಯ ಎಂದರು.ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿ, ಪರಿಸರ ನಾಶದಿಂದ ಹೊಸ ರೋಗಗಳು ಬಂದು ಬದುಕು ಕಷ್ಟವಾಗಿದೆ. ಆದ್ದರಿಂದ ಮಕ್ಕಳು ಮನಸ್ಸು ಮಾಡಿದರೆ ದೊಡ್ಡವರ ಮನಸ್ಸು ಪರಿವರ್ತನೆ ಮಾಡಬಹುದು. ಮನೆಯಲ್ಲಿಯೇ ದೊಡ್ಡವರಿಗೆ ನೀರು ಪೋಲಾಗದಂತೆ, ವಿದ್ಯುಚ್ಛಕ್ತಿ ವ್ಯರ್ಥ ಮಾಡದಂತೆ ಪಾಲಕರಿಗೆ ತಿಳಿಹೇಳುವ ಮೂಲಕ ಪರಿಸರ ರಕ್ಷಿಸಲು ಮಕ್ಕಳು ಮುಂದಾಗಬೇಕೆಂದರು.
ಪ್ರಕಾಶ ತುರಮರಿ, ಪ್ರಕಾಶ ಬಾಳಿಕಾಯಿ ಮಾತನಾಡಿ, ಪರಿಸರ ರಕ್ಷಣೆ ಮತ್ತು ಕಾಳಜಿ ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕು ಎಂದರು.ಗುಬ್ಬಚ್ಚಿ ಗೂಡು ಶಾಲೆಯ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಸಾಬಳೆ ಸ್ವಾಗತಿಸಿದರು. ಪ್ರಧಾನ ಗುರುಮಾತೆ ಲಕ್ಷ್ಮಿ ಜಾಧವ ನಿರೂಪಿಸಿದರು. ಶಾಲೆಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ ಸುಭಾಂಜಿ, ಡಾ. ಎಲ್. ದೇಸಾಯಿ, ದೈಹಿಕ ಶಿಕ್ಷಕ ಸಿಕಂದರ ದಂಡೀನ ಇದ್ದರು.