ಕನ್ನಡಪ್ರಭ ವಾರ್ತೆ ಹಾಸನ
ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛ ಪರಿಸರ ನಿರ್ಮಾಣದ ಮಹಾನಗರ ಪಾಲಿಕೆ ಕ್ರಮಕ್ಕೆ ಯಾರಾದರೂ ಪ್ರಭಾವಿಗಳು ಅಡ್ಡಗಾಲು ಹಾಕಲು ತಮ್ಮ ಮೊಬೈಲಿಗೆ ಕರೆ ಮಾಡಿದರೆ ಅಂಥವರ ಆಡಿಯೋವನ್ನು ಮಾಧ್ಯಮಗಳಿಗೆ ನೀಡಿ ಎಲ್ಲೆಡೆ ಪ್ರಚಾರ ಮಾಡಲಾಗುವುದು ಎಂದು ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಕವಿತಾ ಎಚ್ಚರಿಸಿದರು.ಉಪ ಮೇಯರ್ ಹೇಮಲತಾ ಕಮಲ್ ಕುಮಾರ್ ಸೇರಿದಂತೆ ಹಲವರು ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಸ್ವಚ್ಛ ಭಾರತ್ ಮಿಷನ್, ಜಿಲ್ಲಾಡಳಿತ, ಮಹಾನಗರ ಪಾಲಿಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದ ಏಕ ಬಳಕೆಯ ನಿಷೇಧಿತ ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ವೇಳೆ ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಕೆಟ್ಟ ಕೆಟ್ಟ ಖಾಯಿಲೆಗಳು ಉದ್ಭವಿಸುತ್ತವೆ. ಭೂಮಿ ಮೇಲೆ ಬಿದ್ದರೇ ಪ್ಲಾಸ್ಟಿಕ್ ಕರಗುವುದಿಲ್ಲ. ಇನ್ನು ಪ್ಲಾಸ್ಟಿಕನ್ನು ಸುಟ್ಟಾಗ ಅದರಿಂದ ಬರುವ ವಾಸನೆಯು ಮನುಷ್ಯನ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ತ್ಯಾಜ್ಯದಲ್ಲಿ ಹಸಿ ಕಸ ಮತ್ತು ಒಣ ಕಸ ಬೇರೆ ಬೇರೆ ಮಾಡಬೇಕು. ಹಾಸನ ಮಹಾನಗರ ಪಾಲಿಕೆಯನ್ನು ಗ್ರೀನ್ ಸಿಟಿ ಮಾಡಬೇಕೆಂಬುದಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಪಾಲಕ ಎಂಜಿನಿಯರ್ ಕವಿತಾ ಮಾತನಾಡಿ, ಪ್ಲಾಸ್ಟಿಕ್ ವಿಚಾರದಲ್ಲಿ ಮಹಾನಗರ ಪಾಲಿಕೆ ಯಾವ ಕ್ರಮಕೈಗೊಳ್ಳುತ್ತದೆ ಅದಕ್ಕೆ ಯಾರಾದರೂ ಪ್ರಭಾವಿ ವ್ಯಕ್ತಿಯಿಂದ ಪ್ರಭಾವ ಬೀರಲು ಮುಂದಾಗಿ ನಮಗೆ ಕರೆ ಮಾಡಿದರೇ ಆ ಆಡಿಯೋವನ್ನು ಮಾಧ್ಯಮಕ್ಕೆ ನೀಡಿ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದರು. ಪರಿಸರವನ್ನು ಯಾರು ಹಾಳು ಮಾಡುತ್ತಿದ್ದಾರೆ ಅವರನ್ನ ಸರಿ ದಾರಿಗೆ ತರಲಾಗುವುದು. ಈ ವೇಳೆ ಯಾರು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.ವ್ಯಾಪಾರಸ್ಥರು ಮತ್ತು ಗ್ರಾಹಕರು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಬ್ಯಾಗನ್ನು ಉಪಯೋಗಿಸಬೇಕು. ಇದರಿಂದ ನಮ್ಮ ದೇಶ ಒಂದು ಹೆಜ್ಜೆ ಪ್ರಗತಿಯಲ್ಲಿ ಮುಂದೆ ಸಾಗುತ್ತದೆ. ನಾವು ಪರಿಶೀಲನೆಗೆ ಬಂದಾಗ ಪ್ಲಾಸ್ಟಿಕ್ ಸೀಜ್ ಮಾಡುತ್ತೇವೆ. ಜೊತೆಗೆ ದಂಡ ಹಾಕಿದಾಗ ವ್ಯಾಪಾರಸ್ತರಿಗೆ ನಷ್ಟವಾಗುತ್ತದೆ. ಇದನ್ನರಿತು ಬಟ್ಟೆ ಬ್ಯಾಗ್ ಉಪಯೋಗಿಸಬೇಕು. ಹಳ್ಳಿ ಜನರಿಗೆ ಇರುವ ಅರಿವು ಪಟ್ಟಣದ ಜನರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಮುಂದೆ ಏನಾದರೂ ಪ್ಲಾಸ್ಟಿಕ್ ಕಂಡುಬಂದರೇ ದಂಡದ ಜೊತೆಗೆ ನಿಮ್ಮ ಅಂಗಡಿ ವ್ಯಾಪಾರವನ್ನೇ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಕಟ್ಟಿನಕೆರೆ ಮಾರುಕಟ್ಟೆ ಒಳಗೆ ಅಂಗಡಿ ವ್ಯಾಪಾರಸ್ತರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪ್ರತಿ ಅಂಗಡಿ ಮುಂದೆ ಸ್ಟಿಕರ್ ಅಂಟಿಸಿ ಬಟ್ಟೆ ಬ್ಯಾಗ್ ನೀಡಿ ಜಾಗೃತಿ ಮೂಡಿಸಿದರು. ಈ ವೇಳೆ ತಪಾಸಣೆ ಮಾಡಿದಾಗ ಅನೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಇರುವುದು ಕಂಡುಬಂದಿತು. ಪ್ಲಾಸ್ಟಿಕ್ ಸೀಜ್ ಮಾಡಿದಲ್ಲದೇ ಎಚ್ಚರಿಕೆ ಕೂಡ ನೀಡಿದರು.