ಹಾವೇರಿ: ಪರಿಸರ ಮನುಷ್ಯನ ಉತ್ತಮ ಬದುಕಿಗಾಗಿ ಸಕಲವನ್ನೂ ಕೊಡುತ್ತದೆ. ಆದರೆ ಅವನ ಸ್ವಾರ್ಥ ಮತ್ತು ದುರಾಸೆಯಿಂದಾಗಿ ಪ್ರಕೃತಿ ಮೇಲಿನ ಅಮಾನುಷ ದಾಳಿಯಿಂದಾಗಿ ಎಲ್ಲವೂ ಮಲಿನಗೊಂಡು ಪರಿಸರ ತನ್ನ ಸಮತೋಲನ ಕಳೆದುಕೊಳ್ಳುತ್ತಿದೆ ಎಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಹೇಳಿದರು.
ಕುಡಿಯುವ ನೀರು, ಶುದ್ಧ ಗಾಳಿಯನ್ನು ಹಣ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿಯಿದೆ. ತಿನ್ನುವ ಆಹಾರದಲ್ಲಿ ರಾಸಾಯನಿಕ ವಿಷ ಬೆರೆತಿದೆ. ಕಾಡುಗಳ ನಾಶ, ವಿಪರೀತ ನಗರೀಕರಣ, ಮಿತಿಮೀರಿದ ಕೈಗಾರಿಕೀಕರಣ, ಪ್ಲಾಸ್ಟಿಕ್ ವಸ್ತುಗಳ ಸೃಷ್ಟಿ, ಮನುಷ್ಯ ಜನ್ಯ ತ್ಯಾಜ್ಯಗಳು ಮತ್ತು ಇ- ತ್ಯಾಜ್ಯ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಆರೋಗ್ಯ ಹದಗೆಡುತ್ತಿದೆ. ಕೂಡಲೇ ಎಚ್ಚೆತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹೊಣೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಕನಿಷ್ಠ ಮನೆಗೊಂದು ಮರವನ್ನ ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
''ಇಕೋ ಕ್ಲಬ್''ನ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಪಂಚಭೂತಗಳಿಂದ ಸೃಷ್ಟಿಯಾದ ನಾವು, ನಮ್ಮ ಸ್ವಾರ್ಥಕ್ಕಾಗಿ ಈ ಸೃಷ್ಟಿಯ ಪಂಚಭೂತಗಳನ್ನೇ ಮಲಿನಗೊಳಿಸಿದ್ದೇವೆ. ಭೂಮಿ ತಾಯಿ ಎಂದು ಪೂಜಿಸಿ ಅವಳ ಒಡಲನ್ನೇ ಬಗೆಯುತ್ತೇವೆ. ನೆಲ, ಜಲ ಗಾಳಿಗೂ ವಿಷ ತುಂಬಿದ್ದೇವೆ. ಕಾರ್ಖಾನೆ, ವಾಹನಗಳ ಹೊಗೆಯಿಂದ ದೆಹಲಿ, ಮುಂಬೈ, ಕೋಲ್ಕತ್ತಾದಂತಹ ದೊಡ್ಡ ನಗರಗಳು ವಿಷಯುಕ್ತ ಹೊಗೆಯಿಂದ ಮುಚ್ಚಿಕೊಳ್ಳುತ್ತವೆ. ಅಭಿವೃದ್ಧಿ ಎಂಬ ಕಲ್ಪನೆಯಿಂದ ಪರಿಸರದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ ಎಂದರು.ನಂತರ ಕವಿಗೋಷ್ಠಿಯಲ್ಲಿ ಉಪನ್ಯಾಸಕಿ ನಿರ್ಮಲಾ ಎಸ್., ವಿದ್ಯಾರ್ಥಿನಿಯರಾದ ಗಿರಿಜಾ ಕಡೆಕೊಪ್ಪ, ಅನಿತಾ ಕೋಣಿಯವರ, ಸಾನಿಯಾ ಗುಳೇದ, ಮೇಘಾ, ಐಶ್ವರ್ಯಾ ಸ್ವರಚಿತ ಕವಿತೆ ವಾಚಿಸಿದರು. ತದನಂತರ ಉಪನ್ಯಾಸಕ ಎಸ್.ಎಸ್. ನಿಸ್ಸೀಮಗೌಡ್ರು, ಮನುಷ್ಯನ ಅಸ್ತಿತ್ವಕ್ಕೆ ಪರಿಸರ ಮತ್ತು ಜೀವ ವೈವಿಧ್ಯತೆಯ ಮಹತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ರಮೇಶ ಲಮಾಣಿ, ಮಂಜುನಾಥ ಹತ್ತಿಯವರ ಪಾಲ್ಗೊಂಡಿದ್ದರು. ಭೂಮಿಕಾ ಬಸಾಪುರ ಪ್ರಾರ್ಥಿಸಿದರು. ಸುಚಿತ ನೂಕಾಪುರ ಸ್ವಾಗತಿಸಿದರು. ತನುಷಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಅನಿತಾ ವಂದಿಸಿದರು.