ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವಜಲ ದಿನ, ವಿಶ್ವ ಗುಬ್ಬಚ್ಚಿಗಳ ದಿನ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಯಚೂರು ಕೃಷಿ ಮಹಾವಿದ್ಯಾಲಯದ ಮಣ್ಣು ಮತ್ತು ನೀರು ಪರೀಕ್ಷಾ ನಿರ್ವಹಣಾ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಮಲ್ಲಿಕಾರ್ಜುನ್ ರೆಡ್ಡಿ ಮಾತನಾಡಿ ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುತ್ತದೆ. ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲಿನ್ಯ, ನೀರಿನ ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು ಮತ್ತು ಪ್ರೇರೇಪಿಸುವುದು ಈ ದಿನ ಉದ್ದೇಶವಾಗಿದೆ. ನೀರನ್ನು ಸಮರ್ಪಕ ಬಳಕೆಯನ್ನು ನಿರ್ವಹಿಸುವುದು ಬಹಳ ಮುಖ್ಯ. ಇಂದಿನ ದಿನಗಳಲ್ಲಿ 700 ರಿಂದ 800 ಮಿ.ಮೀ. ಮಳೆಯಾಗುತ್ತದೆ. ಬೋರ್‍ವೆಲ್ ರೀಚಾರ್ಜ್‍ಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಬೋರ್ವೆಲ್‍ಗಳ ಮರುಪೂರ್ಣಗೊಳಿಸಿ ವರ್ಷವಿಡಿ ಕೊಳೆವೆ ಬಾವಿಗಳಲ್ಲಿ ನೀರು ಶೇಖರಣೆಗೊಳ್ಳುತ್ತದೆ. ಬೇಸಿಗೆ ಕಾಲದಲ್ಲಿಯೂ ಸಹ ನೀರು ಬತ್ತುವುದಿಲ್ಲ ಎಂದರು.ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ನಾವು ಕೇಳಿಲ್ಲ. ಈಗ ಕಲಬುರಗಿಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಆಧುನೀಕರಣದ ಹೆಸರಿನಲ್ಲಿ ಮಾನವ ನಿರ್ಮಿತ ಚಟುವಟಿಕೆಗಳಿಂದ ಪರಿಸರ ಹಾಳಾಗುತ್ತಿದೆ. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯಬೇಕು. ಮುಖ್ಯವಾಗಿ ಪರಿಸರ ಸಂರಕ್ಷಣೆ ಮತ್ತು ಪೋಷಣೆ ಎಲ್ಲರ ಹೊಣೆಯಾಗಬೇಕು. ಮಹಿಳೆಯರನ್ನು ಪ್ರಕೃತಿ ಮಾತೆಗೆ ಹೋಲಿಕೆ ಮಾಡಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.