ಪರಿಸರ ಸಂರಕ್ಷಣೆ ಸಂವಿಧಾನ ಬದ್ಧ ಕರ್ತವ್ಯ

KannadaprabhaNewsNetwork |  
Published : Jul 30, 2024, 12:37 AM IST
೨೯ಕೆಎಲ್‌ಆರ್-೧೦ಕೋಲಾರದ ಸರ್‌ಎಂವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ಕದಂಬ ಸೇವಾ ಫೌಂಡೇಷನ್‌ನ ೫೦ ದಿನದ ಸಸಿ ನೆಡುವ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ ಕಾನೂನು ಅರಿವು ಕುರಿತು ಮಾತನಾಡಿದರು. | Kannada Prabha

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ, ಇದಕ್ಕೆ ಅರಣ್ಯ ಬೆಳೆಸದಿರುವುದೇ ಕಾರಣ. ಸಸಿ ನೆಟ್ಟು ಪೋಷಿಸಿ ಮಳೆ ಸುರಿಯುವಂತ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕಾದುದು ಕೋಲಾರ ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ

ಕನ್ನಡಪ್ರಭ ವಾರ್ತೆ ಕೋಲಾರಪರಿಸರ ಸಂರಕ್ಷಣೆ ಸಂವಿಧಾನ ಬದ್ಧ ಕರ್ತವ್ಯವಾಗಿದ್ದು, ದೇಶದ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕೆಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸುನಿಲ್ ಹೊಸಮನಿ ಹೇಳಿದರು.ನಗರದ ಸರ್ಎಂ .ವಿಶ್ವೇಶ್ವರಯ್ಯ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಕದಂಬ ಸೇವಾ ಫೌಂಡೇಷನ್ ನ ೫೦ ದಿನದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಕ್ಕುಗಳ ಜತೆ ಕರ್ತವ್ಯ ಪಾಲಿಸಿ

ಸಂವಿಧಾನವು ದೇಶದ ಜನರಿಗೆ ಕೇವಲ ಹಕ್ಕುಗಳನ್ನು ಮಾತ್ರ ಕೊಟ್ಟಿಲ್ಲ, ಕರ್ತವ್ಯ ಜವಾಬ್ದಾರಿಗಳನ್ನು ನೀಡಿದೆ ಅವುಗಳನ್ನು ಅರಿತು ಪ್ರತಿಯೊಬ್ಬರೂ ಪಾಲಿಸಬೇಕು. ಒಂದು ಮರ ಕಡಿದರೆ ಹತ್ತು ಮರ ಬೆಳೆಸಬೇಕು ಎನ್ನುವ ನಿಯಮವನ್ನು ಪಾಲಿಸಿದಾಗ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದರೂ ಕೋಲಾರ ಜಿಲ್ಲೆಯಲ್ಲಿ ಮಾತ್ರ ಮಳೆ ಕೊರತೆಯಾಗಿದೆ, ಇದಕ್ಕೆ ಅರಣ್ಯ ಬೆಳೆಸದಿರುವುದೇ ಕಾರಣ. ಸಸಿ ನೆಟ್ಟು ಪೋಷಿಸಿ ಮಳೆ ಸುರಿಯುವಂತ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕಾದುದು ಕೋಲಾರ ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದರು.ಸಸಿ ನೆಟ್ಟು ಪರಿಸರ ಸಂರಕ್ಷಣೆ ಕುರಿತು ಸಮಾಜದಲ್ಲಿ ನಿತ್ಯವೂ ಜಾಗೃತಿ ಮೂಡಿಸುತ್ತಿರುವ ಕದಂಬ ಸೇವಾ ಫೌಂಡೇಷನ್ ಉತ್ತಮ ಕಾರ್ಯ ಮಾಡುತ್ತಿದ್ದು, ಇದರಿಂದ ಪ್ರೇರಣೆ ಹೊಂದಿ ಎಲ್ಲರೂ ಸಸಿಗಳ ನೆಟ್ಟು ಮರವಾಗಿಸಬೇಕೆಂದು ಸಲಹೆ ನೀಡಿದರು.ಸಂಚಾರಿ ನಿಯಮ ಪಾಲಿಸಿ

ವಿದ್ಯಾರ್ಥಿಗಳು ೧೮ ವರ್ಷ ತುಂಬುವ ಮೊದಲೇ ವಾಹನ ಚಲಾಯಿಸುವುದು, ಅಪಘಾತ ಮಾಡುವುದು ಮಾಡಿದರೆ ೨೫ ಸಾವಿರ ದಂಡ ಪಾವತಿಸಬೇಕಾಗುತ್ತದೆ, ಮಕ್ಕಳ ಕೈಗೆ ಬೈಕ್ ನೀಡಿದ ಪೋಷಕರು ಜೈಲುವಾಸ ಅನುಭವಿಸಬೇಕಾಗುತ್ತದೆ, ೧೮ ತುಂಬದ ವಾಹನ ಚಲಾವಣೆ ಪರವಾನಗಿ ಇಲ್ಲದ ಯಾವುದೇ ವಿದ್ಯಾರ್ಥಿ ವಾಹನ ಚಲಾಯಿಸಲು ಹೋಗಬಾರದು ಎಂದು ಎಚ್ಚರಿಸಿದರು.ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಹದಿ ಹರೆಯದವರ ಮೇಲೆ ಲೈಂಗಿಕ ದೌರ್ಜನ್ಯ ಇತ್ಯಾದಿ ಕಾನೂನುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ಯಾವುದೇ ಸಂದರ್ಭದಲ್ಲಿ ಇಂತ ಘಟನೆಗಳು ಕಂಡು ಬಂದಾಗ ಪೊಲೀಸ್ ೧೧೨, ಮಕ್ಕಳ ೧೦೯೮, ಕಾನೂನು ನೆರವಿಗಾಗಿ ೧೫೧೦೦ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಹೇಳಿದರು.ಸಸಿ ನೆಟ್ಟು ಜನ್ಮದಿನ ಆಚರಿಸಿ

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಹುಟ್ಟು ಹಬ್ಬವನ್ನು ಆಚರಿಸುವ ಮಕ್ಕಳು ಸಸಿ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಂಪ್ರದಾಯ ಬೆಳೆಸಿಕೊಳ್ಳಬೇಕು, ಹೀಗೆ ನೆಟ್ಟ ಸಸಿಯನ್ನು ಮರವಾಗಿ ಪೋಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಪರಂಪರೆಯನ್ನು ವಿಶ್ವೇಶ್ವರಯ್ಯ ಶಾಲಾ ಮಕ್ಕಳು ಪಾಲಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕೆಂದರು.ಅಧ್ಯಕ್ಷತೆವಹಿಸಿದ್ದ ಶಾಲಾ ಪ್ರಾಂಶುಪಾಲರಾದ ಶ್ರೀದೇವಿ ಬಾಯಿ ಮಾತನಾಡಿ, ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಮರಗಿಡಗಳು ಇಲ್ಲದ ಮರುಭೂಮಿ ಸೃಷ್ಟಿಯಾಗುವ ಆತಂಕ ಇದೆ, ಪರಿಸರ ಸಂರಕ್ಷಣೆ ಹಾಗೂ ಕಾನೂನು ನೆರವು ಕುರಿತು ಈ ಕಾರ್ಯಕ್ರಮದಲ್ಲಿ ಸಲಹೆಗಳನ್ನು ತಮ್ಮ ಶಾಲೆ ಮತ್ತು ಮಕ್ಕಳು ಪಾಲಿಸುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಶಬರೀಶ್ ಯಾದವ್, ಕದಂಬ ಸೇವಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹೊಲ್ಲಂಬಳ್ಳಿ ಶಿವು, ಸದಸ್ಯರಾದ ಆಕಾಶ್, ಲಕ್ಷ್ಮಿ, ಆರ್.ನಂದಿನಿ, ವಂದನ, ಅನೂಷಾ, ನಳಿನಿಗೌಡ ಮತ್ತಿತರರು ಇದ್ದರು.

ಸಂಪಿಗೆ ಸಸಿಗಳ ನಾಟಿ

ಇದೇ ಸಂದರ್ಭದಲ್ಲಿ ಶಾಲೆಯ ಮುಂಭಾಗ ಕದಂಬ ಸೇವಾ ಫೌಂಡೇಷನ್ ಸಂಪಿಗೆ ಸಸಿಗಳನ್ನು ನೆಡಲಾಯಿತು. ಶಾಲಾ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿಕೊಳ್ಳುವುದಿಲ್ಲ, ಮಾದಕ ವಸ್ತುಗಳ ಸೇವಿಸುವುದಿಲ್ಲ ಎಂಬ ಪ್ರಮಾಣ ವಚನವನ್ನು ನ್ಯಾಯಾಧೀಶರು ಬೋಧಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''