ಪರಿಸರ ರಕ್ಷಣೆ ಸಮಾಜದ ಮುಂದಿನ ದೊಡ್ಡ ಸವಾಲು: ಪುರುಷೋತ್ತಮ್

KannadaprabhaNewsNetwork |  
Published : Oct 01, 2026, 01:45 AM IST
೩ಕೆಎಂಎನ್‌ಡಿ-೪ಮಂಡ್ಯದ ಗಾಂಧಿ ಭವನದಲ್ಲಿ ಜೈ ಕರ್ನಾಟಕ ಪರಿಷತ್ ವತಿಯಿಂದ ಎಸ್.ನಾರಾಯಣ್ ರಚಿಸಿರುವ ನಡೆದ ‘ವೃಕ್ಷಾಂತರಂಗ’ ಕೃತಿ ಲೋಕಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ವೃಕ್ಷಗಳ ಮಹತ್ವದ ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುದ್ಧನಿಗೆ ಜ್ಞಾನೋದಯವಾದದ್ದು ವಟವೃಕ್ಷದ ಕೆಳಗೆ. ಸೀತಾಮಾತೆಯು ಅಶೋಕವನದಲ್ಲಿ ಮರಗಳ ಕೆಳಗೆ ಕುಳಿತು ತನ್ನ ಬದುಕಿನ ಮಹತ್ವದ ದಿನಗಳನ್ನು ಕಳೆದಿದ್ದಾಳೆ. ವಾಲ್ಮೀಕಿ ರಾಮಾಯಣವನ್ನು ರಚಿಸಿದ್ದು ಕಾಡಿನಲ್ಲಿ ಮತ್ತು ಶ್ರೀರಾಮಚಂದ್ರ ಹಾಗೂ ಪಾಂಡವರು ಹಲವು ವರ್ಷಗಳ ಕಾಲ ವನವಾಸ ಅನುಭವಿಸಿ ನಾಡನ್ನು ಕಟ್ಟಿದರು. ಕಾಡಿಲ್ಲದೆ ನಾಡು ಇರಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಕೃತಿ, ವೃಕ್ಷಗಳ ಮತ್ತು ನದಿಗಳನ್ನು ಸಂರಕ್ಷಣೆ ಮಾಡುವುದು ಪ್ರಸ್ತುತ ಸಮಾಜದ ಮುಂದಿರುವ ದೊಡ್ಡ ಸವಾಲು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಜೈ ಕರ್ನಾಟಕ ಪರಿಷತ್‌ನಿಂದ ನಡೆದ ‘ವೃಕ್ಷಾಂತರಂಗ’ ಕೃತಿ ಲೋಕಾರ್ಪಣೆ, ಪರಿಸರದವ್ವ ಕವಿಗೋಷ್ಠಿ ಮತ್ತು ಅಂತರ್ಜಾಲ ಲೋಕಾರ್ಪಣೆಯ ತ್ರಿವಿಧ ಸಂಭ್ರಮ ಸಾಹಿತ್ಯಿಕ ಮಹೋತ್ಸವದಲ್ಲಿ ಎಸ್.ನಾರಾಯಣ್ ರಚಿಸಿರುವ ವೃಕ್ಷಾಂತರಂಗ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ವೃಕ್ಷಗಳ ಮಹತ್ವದ ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುದ್ಧನಿಗೆ ಜ್ಞಾನೋದಯವಾದದ್ದು ವಟವೃಕ್ಷದ ಕೆಳಗೆ. ಸೀತಾಮಾತೆಯು ಅಶೋಕವನದಲ್ಲಿ ಮರಗಳ ಕೆಳಗೆ ಕುಳಿತು ತನ್ನ ಬದುಕಿನ ಮಹತ್ವದ ದಿನಗಳನ್ನು ಕಳೆದಿದ್ದಾಳೆ. ವಾಲ್ಮೀಕಿ ರಾಮಾಯಣವನ್ನು ರಚಿಸಿದ್ದು ಕಾಡಿನಲ್ಲಿ ಮತ್ತು ಶ್ರೀರಾಮಚಂದ್ರ ಹಾಗೂ ಪಾಂಡವರು ಹಲವು ವರ್ಷಗಳ ಕಾಲ ವನವಾಸ ಅನುಭವಿಸಿ ನಾಡನ್ನು ಕಟ್ಟಿದರು. ಕಾಡಿಲ್ಲದೆ ನಾಡು ಇರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಹಸಿರು ಬಿತ್ತುವ ಕಾವ್ಯವನ್ನು ಮತ್ತು ಡಾ.ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕೃತಿಯನ್ನು ಉಲ್ಲೇಖಿಸಿದ ಅವರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ವೃಕ್ಷಗಳ ಕುರಿತು ಸುದೀರ್ಘ ಪರಂಪರೆಯಿದೆ. ಆ ಪರಂಪರೆಯನ್ನು ಎಸ್.ನಾರಾಯಣ್ ಅವರು ವೃಕ್ಷಾಂತರಂಗ ಕೃತಿಯ ಮೂಲಕ ತಮ್ಮದೇ ವಿಶಿಷ್ಟ ರೀತಿಯಲ್ಲಿ ಮುಂದುವರಿಸುತ್ತಿರುವುದು ಸಂತೋಷದ ವಿಷಯ. ಜೈ ಕರ್ನಾಟಕ ಪರಿಷತ್ತು ಮರಗಳನ್ನು ಉಳಿಸುವ ಕಾಯಕವನ್ನು ಕೈಗೊಳ್ಳಬೇಕು. ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ಕರೆ ನೀಡಿದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಇಲ್ಲಿ ಅತ್ಯಂತ ಅಪರೂಪದ ಹಾಗೂ ಅರ್ಥಪೂರ್ಣವಾದ ಸಮಾರಂಭ ನೆರವೇರುತ್ತಿದ್ದು, ಎಲ್ಲ ಕ್ಷೇತ್ರಗಳ ಪ್ರಮುಖರನ್ನು ಒಟ್ಟುಗೂಡಿಸಿ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದನ್ನು ಪ್ರಥಮ ಬಾರಿಗೆ ಕಾಣುತ್ತಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪದ್ಮಶ್ರೀ ಪುರಸ್ಕೃತರು ಹಾಗೂ ಪುಸ್ತಕದ ಮನೆ ಎಂ.ಅಂಕೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತ್ರಿವರ್ಣ ಫೌಂಡೇಶನ್ ಸಂಸ್ಥಾಪಕ ಕಲಾರತ್ನ ಪೊಟ್ಲೂರಿ ಹರಿಕೃಷ್ಣ ಅವರು ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು. ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರು ಪುಸ್ತಕ ಕುರಿತು ಮಾತನಾಡಿದರು.

ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ಡಾ.ಸುದೀಪ್ ಕುಮಾರ್, ಎಚ್.ಆರ್.ಕನ್ನಿಕಾ, ಎಂ.ಜಿ.ಯೋಗೇಶ್, ಡಿ.ನಾಗೇಶ್, ವಿಶಾಲ್ ರಘು, ಎಚ್.ಎಲ್.ವಿನಯ್ ಕುಮಾರ್, ಎಂ.ಆರ್.ಮಂಜು, ಸತೀಶ್ ಜವರೇಗೌಡ, ಲಂಕೇಶ್ ಮತ್ತು ಜೆ.ಬಸವರಾಜ್, ಕಾರ್ಯಕ್ರಮ ಆಯೋಜಕ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಮಂಚಶೆಟ್ಟಿ, ಅಶ್ವಿನಿ ಭಾಗವಹಿಸಿದ್ದರು.

ಸಾಹಿತ್ಯ ಮತ್ತು ಸಾಹಿತಿಗಳಿಗೆ ಎಂದಿಗೂ ಸಾವಿಲ್ಲ

ಎಸ್.ನಾರಾಯಣ್ ಅವರು ಉತ್ತಮ ಹೋರಾಟಗಾರರು ಮತ್ತು ಉದ್ಯಮಿ ಎಂಬುದಷ್ಟೇ ತಿಳಿದಿತ್ತು. ಆದರೆ, ಈ ಪುಸ್ತಕದ ಮೂಲಕ ಅವರು ಪರಿಣಾಮಕಾರಿ ಬರಹಗಾರರಾಗಿರುವುದು ಅದರಲ್ಲೂ ವಿಶೇಷವಾಗಿ ಪರಿಸರ ಬರಹಗಾರ ಎಂಬುದು ಸಾಬೀತಾಗಿದೆ ಎಂದು ಶಾಸಕ ಪಿ.ರವಿಕುಮಾರ್‌ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾನ್ಯ ವಿಷಯಗಳ ಕುರಿತು ಯಾರು ಬೇಕಾದರೂ ಬರೆಯಬಹುದು. ಆದರೆ ಪರಿಸರಕ್ಕೆ ಸಂಬಂಧಿಸಿದಂತೆ ಬರೆಯಲು ಬುದ್ಧಿವಂತಿಕೆ ಮತ್ತು ಬರವಣಿಗೆಯ ನೈಪುಣ್ಯ ಅತ್ಯಗತ್ಯ. ಸಾಹಿತ್ಯ ಮತ್ತು ಸಾಹಿತಿಗಳಿಗೆ ಎಂದಿಗೂ ಸಾವಿಲ್ಲ ಎಂದು ಅಭಿಪ್ರಾಯಪಟ್ಟರು.

ಪರಿಸರ ಉಳಿದರೆ ಮಾತ್ರ ಮುಂಬರುವ ಪೀಳಿಗೆಗೆ ಸುರಕ್ಷಿತ ಭವಿಷ್ಯ ಸಿಗುತ್ತದೆ ಎಂದು ತಿಳಿಸಿದ ಅವರು, ಶುದ್ಧ ಗಾಳಿ ಮತ್ತು ನೀರು ಸಿಗಬೇಕಾದರೆ ಗಿಡಗಳನ್ನು ನೆಟ್ಟು ನೀರೆರೆದು ಮರಗಳನ್ನಾಗಿ ಬೆಳೆಸಬೇಕಾಗಿದೆ. ವೃಕ್ಷಾಂತರಂಗ ಕೃತಿಯಲ್ಲಿ ನೂರಕ್ಕೂ ಹೆಚ್ಚು ವಿವಿಧ ಮರಗಳ ಕುರಿತು ವಿವರವಾಗಿ ಬರೆಯಲಾಗಿದ್ದು ಇಂದಿನ ಪೀಳಿಗೆಗೆ ಮತ್ತು ಮಕ್ಕಳಿಗೆ ಈ ಸಸ್ಯವರ್ಗಗಳ ಪರಿಚಯ ಅತ್ಯಗತ್ಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ