ಭದ್ರಾ ಅಭಯಾರಣ್ಯದೊಳಗೆ ಕಟ್ಟಡ ನಿರ್ಮಾಣ, ಹಲವೆಡೆ ಅಭಿವೃದ್ಧಿ ಕಾರ್ಯ, ಮೂಲ ಸ್ವರೂಪಕ್ಕೆ ದಕ್ಕೆ
ಭದ್ರಾ ಅಭಯಾರಣ್ಯದಲ್ಲಿ ಹಲವು ರೀತಿ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಆಸಕ್ತಿ ಹಾಗೂ ಅಸ್ಥೆ ವಹಿಸದ ಕೆಲಸಗಳೇ ನಡೆಯು ತ್ತಿವೆ. ಲಕ್ಕವಳ್ಳಿ ವಿಭಾಗದ ಹಿನ್ನೀರಿನಲ್ಲಿ ಅವ್ಯಾಹತವಾಗಿ ಮತ್ಸ್ಯ ಬೇಟೆ ಅಭಯಾರಣ್ಯ ವ್ಯಾಪ್ತಿಯಲ್ಲೇ ನಡೆದರೂ ಸಹ ಈ ಬಗ್ಗೆ ಇಲಾಖೆ ಕಂಡೂ ಕಾಣದ ರೀತಿ ವರ್ತಿಸುತ್ತಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಣಿಗೆಬೈಲಿನಲ್ಲಿ ನೂರಾರು ತೇಗದ ಮರಗಳನ್ನು ಕಡಿದು ಕದ್ದೊಯ್ಯಲಾಗಿದ್ದು, ಇದರಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಸಹಕರಿಸಿ ಸಾಗಿಸಿದ್ದಾರೆ. ನಂತರ ಇದೇ ವಿಭಾಗದ ಕುಂದೂರಿನಲ್ಲಿ ಬೇಟೆ ನಿಗ್ರಹ ಶಿಬಿರದ ಸುತ್ತಲಲ್ಲೇ ಮರಗಳನ್ನು ಕಡಿತಲೆ ಮಾಡಿರು ವುದು ಅರಣ್ಯಇಲಾಖೆ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.ಅಭಯಾರಣ್ಯದಲ್ಲಿ ಹುಲಿ ಗಣತಿಗೆ ಇಲಾಖೆಯಿಂದಲೇ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕಳ್ಳಬೇಟೆ ನಡೆಸುವವರಿಗೆ ಸಹಾಯಕವಾಗುವಂತೆ ಈ ಕ್ಯಾಮರಾಗಳೇ ಕಳವಾದವು. ಆ ಬಗ್ಗೆ ಸಹ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸದೆ, ಯಾರನ್ನೂ ಹೊಣೆಗಾರರನ್ನಾಗೂ ಮಾಡದೆ ಮೌನ ವ್ರತಕ್ಕೆ ಜಾರಿದ್ದು ಅನೇಕ ಸಂಶಯಗಳಿಗೆ ಕಾರಣವಾಗಿದೆ.
ಅಭಯಾರಣ್ಯದಲ್ಲಿ ಪ್ರಾಣಿ ರಕ್ಷಣೆ ಹಾಗೂ ಅವುಗಳ ವಾಸಕ್ಕೆ ಪೂರಕವಾದ ಕೆಲಸಗಳಿಗೆ ಒತ್ತು ನೀಡದೆ ರಸ್ತೆ ನಿರ್ಮಾಣ, ಚರಂಡಿ ಮಾಡುವುದು, ಹೊಸ ಕಟ್ಟಡಗಳನ್ನು ನಿರ್ಮಿಸುವುದು, ಈ ರೀತಿ ಅನವಶ್ಯಕ ಕೆಲಸಗಳಿಗೆ ಹೆಚ್ಚಿನ ಗಮನವನ್ನು ಇಲಾಖೆ ನೀಡುತ್ತಿದೆ. ಅಭಯಾರಣ್ಯದಲ್ಲಿರುವ ಪುರಾತನ ಬೃಹತ್ ತೇಗದ ಮರದ ಸುತ್ತ ಜೆಸಿಬಿ ಬಳಸಿ ವೃತ್ತಾಕಾರವಾಗಿ ರಸ್ತೆ ಮಾಡಲಾಗಿದೆ. ಕೇಳಿದರೆ, ಪ್ರವಾಸಿಗರ ವೀಕ್ಷಣೆಗಾಗಿ ಎಂದು ಅರಣ್ಯ ಇಲಾಖೆಯವರು ಉತ್ತರ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಅಭಯಾರಣ್ಯದ ಮೂಲ ಉದ್ದೇಶವನ್ನೇ ಅಧಿಕಾರಿಗಳು ಬದಿಗೆ ಸರಿಸಿ ಬೇಡದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
-