ಬಂಡೀಪುರ ರಾತ್ರಿ ವಾಹನ ಸಂಚಾರ ತೆರವಿಗೆ ಯತ್ನ ಖಂಡಿಸಿ ಪರಿಸರವಾದಿಗಳ ಬೃಹತ್ ಪಾದಯಾತ್ರೆ

KannadaprabhaNewsNetwork | Updated : Apr 07 2025, 07:43 AM IST

ಸಾರಾಂಶ

ಬಂಡೀಪುರ ರಾತ್ರಿ ವಾಹನ ಸಂಚಾರ ತೆರವಿಗೆ ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರೊಂದಿಗೆ ತಾಲೂಕಿನ ಕಗ್ಗಳದಹುಂಡಿಯಿಂದ ಮದ್ದೂರು ಅರಣ್ಯ ಚೆಕ್‌ ಪೋಸ್ಟ್‌ ತನಕ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

  ಗುಂಡ್ಲುಪೇಟೆ : ಬಂಡೀಪುರ ರಾತ್ರಿ ವಾಹನ ಸಂಚಾರ ತೆರವಿಗೆ ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರೊಂದಿಗೆ ತಾಲೂಕಿನ ಕಗ್ಗಳದಹುಂಡಿಯಿಂದ ಮದ್ದೂರು ಅರಣ್ಯ ಚೆಕ್‌ ಪೋಸ್ಟ್‌ ತನಕ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಗುಂಡ್ಲುಪೇಟೆ- ಸುಲ್ತಾನ್‌ ಬತ್ತೇರಿ ಹೆದ್ದಾರಿಯ ಕಗ್ಗಳದಹುಂಡಿ ಗ್ರಾಮದಿಂದ ನೂರಾರು ಪರಿಸರವಾದಿಗಳು, ರೈತಸಂಘ, ಕಾಂಗ್ರೆಸ್‌, ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾದಯಾತ್ರೆ ಶುರು ಮಾಡಿದರು.

‘ಉಳಿಸಿ, ಉಳಿಸಿ ಬಂಡೀಪುರ ಉಳಿಸಿ, ವನ್ಯಜೀವಿ,ಕಾಡು ಉಳಿಸಿ’ ಎಂಬ ಭಿತ್ತಿ ಪತ್ರದೊಂದಿಗೆ ಘೋಷಣೆ ಕೂಗುತ್ತ ನೂರಾರು ಮಂದಿ ಪ್ರತಿಭಟನಾಕಾರರು ಹೆಜ್ಜೆ ಹಾಕುತ್ತ ಮದ್ದೂರು ಚೆಕ್‌ ಪೋಸ್ಟ್‌ ತಲುಪಿದರು.

ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಬಂಡೀಪುರ ರಾತ್ರಿ ವಾಹನ ಸಂಚಾರ ತೆರವು ಪ್ರಯತ್ನದ ವಿರುದ್ಧದ ಹೋರಾಟ ನನಗೆ ಮುಖ್ಯ. ಈ ಹಿಂದೆ ೧೫ ನಿಮಿಷಕ್ಕೊಂದು ವಾಹನಗಳು ತೆರಳುತ್ತಿದ್ದವು, ಆದರೀಗ ವಾರದ ಅಂತ್ಯದ ದಿನ ಹಾಗೂ ಹಬ್ಬಗಳ ಸಮಯದಲ್ಲಿ ಪ್ರತಿ ನಾಲ್ಕು ಸೆಕೆಂಡ್‌ಗೆ ಒಂದು ವಾಹನ ಸಂಚರಿಸುವ ಕಾರಣ ವಾಹನಗಳ ದಟ್ಟಣೆಯಿಂದ ಪ್ರಾಣಿಗಳ ಓಡಾಟಕ್ಕೆ ಬೇಲಿ ಹಾಕಿದಂತೆ ಆಗುತ್ತದೆ ಎಂದರು.

ವಾಹನಗಳ ಸಂಚಾರದಿಂದ ಕಾಡು ವಿಭಜನೆಯಾಗುತ್ತಿದೆ ಹಾಗೂ ಅಪಘಾತಗಳಾಗಿ ಸಾವು- ನೋವುಗಳಾಗುತ್ತಿವೆ. ಕಾಡಿನ ಜೀವ ಪರಿಸರವಾಗಿದೆ, ಕೀಟ, ಪ್ರಾಣಿ- ಪಕ್ಷಿಗಳು ಆರೋಗ್ಯಕರ ಪರಿಸರವನ್ನು ಸೃಷ್ಟಿಸುತ್ತಿವೆ ಎಂದರು.

ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಮಾತನಾಡಿ, ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ತೆರವಿಗೆ ಸರ್ಕಾರಗಳು ಪ್ರಯತ್ನಿಸಬಾರದು, ಕೇರಳ ರಾಜ್ಯದ ಒತ್ತಡಕ್ಕೆ ಮಣಿದರೆ ರಾತ್ರಿ ಸಂಚಾರಕ್ಕೆ ಅವಕಾಶ ಕೊಟ್ಟರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.

ಬಿಜೆಪಿ ಯುವ ಮುಖಂಡ ಪ್ರಣಯ್‌ ಮಾತನಾಡಿ, ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಸಂಬಂಧ ಮಾತನಾಡಿದ್ದರು. ಸಿಎಂ ಅವರೇ ಕೇರಳದ ಲಾಬಿಗೆ ಮಣಿಯಬೇಡಿ, ರಾತ್ರಿ ಸಂಚಾರ ನಿಷೇಧ ಮುಂದುವರಿಸಿ ಎಂದರು.

ಕೇರಳ ಪ್ರಕೃತಿ ಸಂರಕ್ಷಣಾ ಸಮಿತಿಯ ಸುರೇಶ್‌ ಕುಮಾರ್‌ ಮಾತನಾಡಿ, ಕೇರಳ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ಮುಂದುವರಿಯಬೇಕು. ರಾತ್ರಿ ಸಂಚಾರ ಆರಂಭವಾದರೆ ವನ್ಯಜೀವಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದರು.

ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಕನ್ನಡತಿ ಅನು ಅಕ್ಕ, ಅರಿಶಿನ ಬೆಳೆಗಾರರ ಸಂಘದ ನಾಗಾರ್ಜುನ್‌ ಮಾತನಾಡಿ, ರಾತ್ರಿ ನಿಷೇಧ ಮುಂದುವರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಿದಾನಂದ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ, ಕೃಷ್ಣಮೂರ್ತಿ ಚಮರಂ, ಗುಂಡ್ಲುಪೇಟೆ ತಾರಾ ನಾಗೇಂದ್ರ, ಮಡಹಳ್ಳಿ ಮಣಿ, ಗೋಪಾಲಪುರ ಲೋಕೇಶ್‌, ಬಲಚವಾಡಿ ಸುಬ್ಬು, ಮಂಜು ಸೇರಿದಂತೆ ಬೆಂಗಳೂರು, ಮೈಸೂರು ನಗರ ಪ್ರದೇಶದ ಪರಿಸರವಾದಿಗಳು ಭಾಗವಹಿಸಿದ್ದರು.

ಜೀವ ಪರಿಸರಕ್ಕೆ ಧಕ್ಕೆ: ಸೇನಾನಿ

ನಿರಂತರ ವಾಹನಗಳ ಸಂಚಾರದಿಂದ ಪ್ರಾಣಿಗಳ ನಡುವೆ ಸಂವಹನ ನಡೆಯುವುದಿಲ್ಲ ಎಂದು ವನ್ಯಜೀವಿ ತಜ್ಞ ಸೇನಾನಿ ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿ, ಜೂನ್‌ ತಿಂಗಳಲ್ಲಿ ಮಳೆ ಬಂದಾಗ ಕೆರೆಗಳ ಬದಿಯಲ್ಲಿ ಆಮೆಗಳು ಮರಿ ಹಾಕಿರುತ್ತವೆ. ಆಮೆಗಳು ರಸ್ತೆ ದಾಟಿ ಯಾವುದೇ ದಿಕ್ಕಿಗೆ ಹೋಗುತ್ತವೆ ಅಲ್ಲದೆ ಖಚಿತ ಗುರಿ ಇರುತ್ತದೆ. ಇಷ್ಟೊಂದು ವಾಹನಗಳ ಸಂಚಾರದಿಂದ ಆಮೆಗಳು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೇ? ಖಂಡಿತ ಸಾಧ್ಯವಿಲ್ಲ. ಹೀಗಾಗಿ ನಿಷೇಧ ತೆರವು ಜೀವ ಪರಿಸರಕ್ಕೆ ಧಕ್ಕೆಯಾಗುವಂತದ್ದು ಎಂದರು.

ಯಥಾಸ್ಥಿತಿ ಮುಂದುವರಿಯಲಿ: ಜೋಸೆಫ್‌ ಬಂಡೀಪುರ ರಾತ್ರಿ ವಾಹನ ಸಂಚಾರ ವಿಚಾರದಲ್ಲಿ ರಾಜ್ಯದ ಸರ್ಕಾರ ಯಥಾಸ್ಥಿತಿ ಸದ್ಯಕ್ಕೆ ಮುಂದುವರಿಸಲಿ ಎಂದು ಪರಿಸರವಾದಿ ಜೋಸೆಫ್‌ ಹೂವರ್‌ ಸಲಹೆ ನೀಡಿದರು. ಪ್ರತಿಭಟನೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೬೬ ರಲ್ಲಿ ರಾತ್ರಿ ಸಮಯದಲ್ಲಿ ೪ ಬಸ್‌ಗಳ ಸಂಚಾರವಿದೆ. ಈಗ ಹೇಗಿದೆಯೋ ಹಾಗೆಯೇ ಮುಂದುವರಿಸಿಕೊಂಡು ಹೋದರೆ ನಮ್ಮದೇನು ತಕರಾರು ಇಲ್ಲ ಎಂದರು.

ರಾತ್ರಿ ಸಂಚಾರ ನಿಷೇಧ ಸಂಬಂಧ ರಾಜ್ಯ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರೆ ಹೋರಾಟ ನಿಲ್ಲಲಿದೆ, ಒಂದು ವೇಳೆ ಕೇರಳಿಗರ ಒತ್ತಡಕ್ಕೆ ಮಣಿದರೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದರು.

ನಿರ್ಬಂಧ ತೆರವು ಸರ್ಕಾರ ಹೇಳಿಲ್ಲ: ಟಿ.ಬಾಲಚಂದ್ರ

ಬಂಡೀಪುರ ವಾಹನ ಸಂಚಾರ ನಿರ್ಬಂಧ ತೆರವು ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿಲ್ಲ, ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಯು ಪರಿಸರವಾದಿಗಳು ಹಾಗೂ ಜನರಲ್ಲಿ ಆತಂಕ ಹೆಚ್ಚಿದೆ ಎಂದು ಐಎಫ್‌ಎಸ್‌ ನಿವೃತ್ತ ಅಧಿಕಾರಿ ಟಿ.ಬಾಲಚಂದ್ರ ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿ, ಬಂಡೀಪುರ ರಾತ್ರಿ ವಾಹನಗಳ ಸಂಚಾರ ನಿರ್ಬಂಧ ಮುಂದುವರಿಸಬೇಕು ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ಅಭಿಯಾನ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಿಂದೆ ಸರಿಯಬೇಕು. ರಾತ್ರಿ ವಾಹನಗಳ ಸಂಚಾರ ವಿಷಯದಲ್ಲಿ ಯಥಾಸ್ಥಿತಿ ಇರಲಿ. ನಿರ್ಬಂಧದಿಂದ ವನ್ಯಜೀವಿಗಳ ಸಾವು ಕಡಿಮೆಯಾಗಿವೆ. ರಾಜ್ಯ ಸರ್ಕಾರ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಲ್ಲ ಎಂಬ ವಿಶ್ವಾಸವಿದೆ ಎಂದರು.

ಕೇರಳ ಸರ್ಕಾರ ರಾತ್ರಿ ಸಂಚಾರ ತೆರವಿಗೆ ಕೇಳಿಲ್ಲ, ಸರ್ಕಾರಕ್ಕೂ ಮನವಿ ಸಲ್ಲಿಸಿಲ್ಲ

ಪ್ರತಿಭಟನಾ ಸ್ಥಳದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪಷ್ಟನೆ 

 ಗುಂಡ್ಲುಪೇಟೆ : ಬಂಡೀಪುರ ರಾತ್ರಿ ವಾಹನಗಳ ಸಂಚಾರ ನಿರ್ಬಂಧ ತೆರವಿಗೆ ಕೇರಳ ಸರ್ಕಾರ ರಾಜ್ಯ ಸರ್ಕಾರ ಬಳಿ ಕೇಳಿಲ್ಲ. ಮನವಿಯನ್ನೂ ಸಲ್ಲಿಸಿಲ್ಲ, ರಾತ್ರಿ ವಾಹನ ಸಂಚಾರ ತೆರವು ಪ್ರಸ್ತಾವನೆಯೇ ಇಲ್ಲ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದರು.

ಬಂಡೀಪುರ ರಾತ್ರಿ ವಾಹನ ಸಂಚಾರ ತೆರವಿಗೆ ರಾಜ್ಯ ಸರ್ಕಾರ ಪ್ರಯತ್ನಿಸಿದೆ ಎಂದು ಪಾದಯಾತ್ರೆ ಬಳಿಕ ಸಮಾವೇಶಗೊಂಡ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಇತ್ತೀಚೆಗೆ ಬಂಡೀಪುರ ರಾತ್ರಿ ವಾಹನ ಸಂಚಾರ ಸಂಬಂಧ ಚರ್ಚೆ ನಡೆದಿದೆ. ಆದರೆ ಕೇರಳ ರಾಜ್ಯ ಸರ್ಕಾರ ಬಂಡೀಪುರ ರಾತ್ರಿ ಸಂಚಾರ ತೆರವಿಗೆ ಕೇಳಿಲ್ಲ. ಜನರಲ್ಲಿ ತಪ್ಪು ಮಾಹಿತಿ ಸಿಕ್ಕಿದೆ. ನಮ್ಮ ಸರ್ಕಾರಕ್ಕೂ ಈ ವಿಚಾರ ಬಂದಿಲ್ಲ ಎಂದರು.

ರಾತ್ರಿ ವಾಹನಗಳ ಸಂಚಾರ ತೆರವಿಗೆ ಪ್ರಯತ್ನ ನಡೆದಿಲ್ಲ. ಆದರೆ, ಕೇರಳ ಸರ್ಕಾರ ರಾತ್ರಿ ಮತ್ತೆ ನಾಲ್ಕು ಹೆಚ್ಚುವರಿ ಬಸ್‌ ಸಂಚಾರಕ್ಕೆ ಅವಕಾಶ ಕೊಡಿ ಎಂದಿದ್ದಾರೆ. ಆದರೆ ವಾಸ್ತವವಾಗಿ ಈಗ ಹಾಲಿ ಹೋಗುವ ಬಸ್‌ ಗಳು ಭರ್ತಿಯಾಗುತ್ತಿಲ್ಲ ಎಂಬ ಮಾಹಿತಿ ಎಂದರು.

ಹೇಳಿ,ಕೇಳಿ ಬಂಡೀಪುರ ರಾತ್ರಿ ವಾಹನಗಳ ಸಂಚಾರ ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ. ಕೋರ್ಟ್‌ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಕೋರ್ಟ್‌ ಆದೇಶ ಅಂತಿಮ ಎಂದರು.

ಪರಿಸರವಾದಿಗಳು ಹಾಗೂ ಸ್ಥಳೀಯರು ರಾತ್ರಿ ವಾಹನ ಸಂಚಾರ ನಿರ್ಬಂಧ ತೆರವು ಬೇಡ ಎಂದು ಮನವಿ ನನಗೆ ಸಲ್ಲಿಸಿದ್ದೀರಾ. ನಿಮ್ಮ ಕೂಗನ್ನು ಸಿಎಂ, ಡಿಸಿಎಂ ಹಾಗು ಅರಣ್ಯ ಸಚಿವರ ಗಮನಕ್ಕೆ ಮುಟ್ಟಿಸುವೆ ಎಂದರು.

ಶಾಸಕರೊಂದಿಗೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಪರಿಸರವಾದಿಗಳು ಹಾಗೂ ಸ್ಥಳೀಯರೊಂದಿಗೆ ಎಸಿಎಫ್‌ ಗಳಾದ ಎನ್.‌ಪಿ.ನವೀನ್‌ ಕುಮಾರ್‌, ಸುರೇಶ್‌, ಆರ್‌ಎಫ್‌ಒಗಳಾದ ಪುನೀತ್‌, ನಿಸಾರ್‌,ಪೊಲೀಸ್‌ ಇನ್ಸ್‌ಪೆಕ್ಟರ್‌ ಜಯಕುಮಾರ್‌ ಇದ್ದರು.

Share this article