ಶಾಸಕ ಧೀರಜ್ ಮುನಿರಾಜು ವಿರುದ್ಧ ಕಿಡಿ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಬಡಾವಣೆ ನಿರ್ಮಾಣಕ್ಕೆ ಪೂರಕವಾಗಿ ಹೆದ್ದಾರಿ ಬದಿಯ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ನೀಡಿರುವ ಪ್ರಕರಣದ ವಿರುದ್ಧ ಪರಿಸರಾಸಕ್ತರು ಶಾಸಕ ಧೀರಜ್ ಮುನಿರಾಜು ವಿರುದ್ಧ ದನಿಯೆತ್ತಿದ್ದಾರೆ. ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಣಸೆ ಮರಗಳ ಇರುವುದರಿಂದ ಹೆದ್ದಾರಿಗೆ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಬಹಳ ವರ್ಷಗಳಿಂದ ಈ ಮರಗಳು ಯಾರಿಗೂ ಏನೂ ತೊಂದರೆ ಮಾಡಿಲ್ಲ. ವಿದ್ಯುತ್ ಕಂಬಗಳಿಗೆ ಕೇಬಲ್ ತಂತಿಗಳನ್ನು ಅಳವಡಿಸಿರುವುದರಿಂದ ಯಾವುದೇ ಅವಘಡಗಳೂ ಸಂಭವಿಸುವುದಿಲ್ಲ. ವಿದ್ಯುತ್ ತಂತಿಗಳು ತೊಂದರೆ ಮಾಡುತ್ತವೆ ಎಂದು ರೆಂಬೆ ಕೊಂಬೆಗಳನ್ನು ತೆಗೆಸುವ ನೆಪದಲ್ಲಿ ಬೃಹತ್ತಾಗಿ ಬೆಳೆದಿದ್ದ ಅರ್ಧ ಮರಗಳನ್ನೇ ಕತ್ತರಿಸಿದ್ದಾರೆ ಎಂದು ಆರೋಪಿಸಿದರು. ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಹೀಗೆ ಮಾಡಿದರೆ ಸಾಮಾನ್ಯರ ನಡೆ ಯಾವ ರೀತಿ ಇರುತ್ತದೆ. ಈ ನಡೆ ಶಾಸಕರಿಗೆ ಗೌರವ ತರುವಂತಹದ್ದಲ್ಲ. ಪರಿಸರ ಪ್ರೇಮಿಗಳ ನಿರಂತರ ಹೋರಾಟದಿಂದ ನೂರಾರು ವರ್ಷಗಳ ಮರಗಳನ್ನು ಕಡಿಯುವ ಕೆಲಸಕ್ಕೆ ಕಡಿವಾಣ ಹಾಕಲಾಗಿತ್ತು. ಈಗ ಹೊಸ ಶಾಸಕರು ಅಧಿಕಾರಕ್ಕೆ ಬಂದ ನಂತರ ಉಳಿಸಿಕೊಂಡಿದ್ದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ನಾಲ್ಕು ಮರಗಳ ಹತ್ತು ಕೊಂಬೆಗಳನ್ನು ಕಡಿಯಲು ಹಾಗೂ ಎರಡು ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಅನುಮತಿ ಪಡೆದಿದ್ದಾರೆ. ಇದಕ್ಕೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು. ಪರಿಸರ ನಾಶದಿಂದ ಅನೇಕ ಕಾಯಿಲೆಗಳಿಂದ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸುತ್ತಿದ್ದೇವೆ. ಈ ಹಿರಿಯ ಮರಗಳು ದೊಡ್ಡಬಳ್ಳಾಪುರದ ಚರಿತ್ರೆಯನ್ನು ಬಿಚ್ಚಿಡುತ್ತವೆ. ಅಂತಹ ಮರಗಳನ್ನು ಕಡಿಯುತ್ತಿರುವುದು ಶೋಚನೀಯ ಸಂಗತಿ ಎಂದು ಕಿಡಿಕಾರಿದರು.