ಚಿಕ್ಕೋಡಿ ವಲಸೆ ಕುರಿಗಳಿಗೆ ಆಸರೆಯಾದ ತುಂಗಭದ್ರಾ ಹಿನ್ನೀರು ಪ್ರದೇಶ

KannadaprabhaNewsNetwork | Published : Jul 19, 2024 12:53 AM

ಸಾರಾಂಶ

ಕುರಿಗಳು ಚಿಗುರು ಹುಲ್ಲನ್ನು ನದಿಯ ತಟದಲ್ಲಿ ಮೇಯುತ್ತಿರುವ ದೃಶ್ಯ ಅತ್ಯಂತ ಮನಮೋಹಕವಾಗಿ ಕಾಣುತ್ತದೆ.

ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ಮೇವು ಅರಸಿ ತಾಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಬಂದಿರುವ ಚಿಕ್ಕೋಡಿ ತಾಲೂಕಿನ ೩೫೦ಕ್ಕೂ ಹೆಚ್ಚು ಕುಟುಂಬಗಳ ಲಕ್ಷಗಟ್ಟಲೆ ಕುರಿಗಳ ಹಿಂಡು ತುಂಗಭದ್ರೆಗೆ ಕಳೆ ತಂದಿವೆ.

ಕುರಿಗಳು ಚಿಗುರು ಹುಲ್ಲನ್ನು ನದಿಯ ತಟದಲ್ಲಿ ಮೇಯುತ್ತಿರುವ ದೃಶ್ಯ ಅತ್ಯಂತ ಮನಮೋಹಕವಾಗಿ ಕಾಣುತ್ತದೆ. ಅಲ್ಲಲ್ಲಿ ಶೆಡ್‌ ನಿರ್ಮಿಸಿಕೊಂಡು ಕುಟುಂಬ ಸಮೇತ ಕುರಿ ಮೇಯಿಸಲು ಬಂದಿರುವ ಈ ಕುರಿಗಾಹಿಗಳ ಬದುಕು ವಿಭಿನ್ನವಾದುದು. ಮಳೆ-ಗಾಳಿಗೆ ಜಗ್ಗದೆ ಸಣ್ಣಮಕ್ಕಳೊಂದಿಗೆ ಶೆಡ್‌ನಲ್ಲಿ ಜೀವನ ಸಾಗಿಸುವ ಸಂಚಾರಿ ಕುರುಬ ಸಮುದಾಯದ ಜೀವನ ಪದ್ಧತಿ ಅಚ್ಚರಿ ಮೂಡಿಸುವಂಥದ್ದು.

ಭೂಮಿ ಕೊರತೆ:

ಚಿಕ್ಕೋಡಿ ಭಾಗದಲ್ಲಿ ಮೇಯಿಸಲು ಭೂಮಿ ಕೊರತೆ ಇರುವುದರಿಂದ ಇತ್ತ ಬಂದಿದ್ದೇವೆ. ಮೊದಲಿನಿಂದಲೂ ಈ ಕಡೆ ಕುರಿ ಮೇಯಿಸಲು ಬರುತ್ತೇವೆ. ಇಲ್ಲಿಯ ರೈತರು ನಮ್ಮ ಊರಿನವರಂತೆ ಆಗಿದ್ದಾರೆ. ನಮ್ಮ ಭಾಗದಲ್ಲಿ ಭೂಮಿಯನ್ನು ಪ್ರತಿಯೊಬ್ಬರೂ ಉಳುಮೆ ಮಾಡುತ್ತಿರುವುದರಿಂದ ಮೇವಿನ ಕೊರತೆ ಹೆಚ್ಚಿದೆ. ತುಂಗಭದ್ರಾ ಹಿನ್ನೀರು ಪ್ರದೇಶ ವಿಶಾಲವಾಗಿರುವುದರಿಂದ ನಮ್ಮ ಕುರಿಗಳನ್ನು ಮೇಯಿಸಲು ಅನುಕೂಲವಾಗಿದೆ. ಹಿಂದೆ ಕುದುರೆ ಮೇಲೆ ಗಂಟುಮೂಟೆ ಕಟ್ಟಿಕೊಂಡು ಕುರಿಗಳೊಂದಿಗೆ ಬರುತ್ತಿದ್ವಿ, ಈಗ ಬದಲಾದ ಕಾಲಮಾನದಿಂದಾಗಿ ಟ್ರಾಕ್ಟರ್‌ಗಳಲ್ಲಿ ನಮ್ಮ ಸಾಮಗ್ರಿಗಳನ್ನು ಹಾಕಿಕೊಂಡು ಮೇವು ಇದ್ದಕಡೆ ಪಯಣ ಬೆಳೆಸುತ್ತೇವೆ. ಕುರಿಗಳೇ ನಮ್ಮ ಜೀವನ ಸಾಗಿಸೋದು, ಇವು ಇಲ್ಲ ಅಂದ್ರೆ ನಮ್ಮ ಬದುಕು ಕಷ್ಟಕರ ಎನ್ನುತ್ತಾರೆ ಚಿಕ್ಕೋಡಿ ಕುರಿಗಾಹಿಗಳು.

ನಾವೇ ಡಾಕ್ಟ್ರು:

ಕುರಿಗಳಿಗೆ ಬರುವ ಪಿಪಿಆರ್, ಅಮ್ಮ, ಹುಲ್ಲುಸಿಡಿ, ವೀಟಿ, ಎಚ್‌ಎಸ್, ನೀಲಿನಾಲಗೆ ರೋಗಗಳಿಗೆ ನಾವೇ ವ್ಯಾಕ್ಸಿನ್ ಹಾಕುತ್ತೇವೆ. ಎಲ್ಲದಕ್ಕೂ ಡಾಕ್ಟ್ರುನ ಕಾಯಕೊಂಡು ಕುಂತರೆ ಅಷ್ಟೊತ್ತಿಗೆ ನಮ್ಮ ಕುರಿಗಳ ಜೀವ ಇರಲ್ಲ ಎಂದು ಕುರಿಗಾಹಿಗಳಾದ ವಿಠಲರಾಘು ಭತ್ತೆ, ನಿಂಗಪ್ಪ, ಶಂಕರ ವಿಠಲ ಹೆಗ್ಗಣ್ಣನವರ್ ಹೇಳುತ್ತಾರೆ.

ಪರಿಹಾರ ಮೊತ್ತ ಹೆಚ್ಚಿಸಲಿ:

ಕುರಿಗಳು ಸತ್ತರೆ ಸರ್ಕಾರ ಕೊಡುವ ಐದು ಸಾವಿರ ರುಪಾಯಿ ನಮ್ಮ ಕೈಗೆ ಸೇರಲ್ಲ. ಸರ್ಕಾರ ಪರಿಹಾರ ಮೊತ್ತವನ್ನು ₹೧೦ ಸಾವಿರಕ್ಕೆ ಹೆಚ್ಚಿಸಬೇಕು. ಕುರಿ ಸತ್ತ ಆನಂತರ ಅದರ ಪೋಟೋ, ಪೋಸ್ಟ್‌ ಮಾರ್ಟ್ಂ ರಿಪೋಟ್ ತೆಗೆದುಕೊಳ್ಳುವುದಕ್ಕೆ ₹2-3 ಸಾವಿರ ಖರ್ಚು ಆಗುತ್ತದೆ. ಶನಿವಾರ, ಭಾನುವಾರ ಕುರಿಗಳು ಸತ್ತರೆ ಪಶುವೈದ್ಯರು ಅಂದು ಸಿಗುವುದೇ ಇಲ್ಲ. ಹೀಗಾಗಿ ನಮಗೆ ಪರಿಹಾರ ಸಿಗೋದಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಹಿಡಿದು ಈ ವರೆಗೂ ಸತ್ತ ಕುರಿಗಳಿಗೆ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ಕುರಿಗಾಹಿಗಳು ಅತ್ಯಂತ ನೋವಿನಿಂದ ನುಡಿದರು.ಸರ್ಕಾರ ಕುರಿ ಮೇಯಲು ಅರಣ್ಯ ಪ್ರದೇಶದಲ್ಲಿ ಅವಕಾಶ ನೀಡಬೇಕು. ಸತ್ತ ಕುರಿಗಳ ಪರಿಹಾರವನ್ನು ಪಡೆಯಲು, ಕುರಿಗಾಹಿಗಳು ಅಲೆದಾಡಿಸುವುದನ್ನು ತಪ್ಪಿಸಬೇಕು. ಪಶುವೈದ್ಯರು ಕುರಿಗಳಿಗೆ ಬರುವ ಕಾಯಿಲೆ ಮತ್ತು ಮುಂಜಾಗ್ರತೆ ಕುರಿತು ಕುರಿಗಾಹಿಗಳಿಗೆ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಚಿಕ್ಕೋಡಿ ತಾಲೂಕಿನ ಗ್ರಾಪಂ ಸದಸ್ಯ, ಸತ್ಯಪ್ಪ ಹಿರೇಕೊಡಿ ಕುರಿಗಾಹಿ.

Share this article