-ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಆರೋಪ । ರೋಗದ ತೀವ್ರತೆ ಬಗ್ಗೆ ಅಸಡ್ಡೆ ಭಾವನೆ । ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಡೆಂಘೀ ನಿಯಂತ್ರಣಕ್ಕೆ ಚಳ್ಳಕೆರೆ ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆರೋಪಿಸಿದ್ದಾರೆ.ಜಿಲ್ಲೆಯಲ್ಲಿ ಡೆಂಘೀ ಜ್ವರ ಹರಡುವ ತೀವ್ರತೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ರೋಗ ಹತೋಟಿಗೆ ಜಾಥಾ, ಸಭೆಗಳ ಮೂಲಕ ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತಕ್ಕೆ ಇರುವ ತೀವ್ರತೆ ತಾಲೂಕು ಆಡಳಿತಕ್ಕೆ ಇದ್ದಂತಿಲ್ಲ. ನೆಪ ಮಾತ್ರಕ್ಕೆ ಸಭೆ ಜಿಪಿಎಸ್ ಫೋಟೋಗಳನ್ನು ಜಿಲ್ಲಾಡಳಿತಕ್ಕೆ ರವಾನಿಸಿ ಅವರವರ ಸ್ವಂತ ಕೆಲಸದಲ್ಲಿ ತೊಡಗಿಸಿಕೊಂಡು ರೋಗದ ತೀವ್ರತೆ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಳ್ಳಕೆರೆ ತಹಸೀಲ್ದಾರ್ ಅವರಿಗೆ ರೈತರು ಪ್ರತಿಭಟನೆ ಮೂಲಕ 2 ಬಾರಿ ರೋಗದ ತೀವ್ರತೆ ಬಗ್ಗೆ ತಾಲೂಕು ಪಂಚಾಯ್ತಿಗೂ 2 ಬಾರಿ ಮನವಿ ಕೊಟ್ಟು ಮುಂದೆ ಆಗಬಹುದಾದ ಪ್ರಾಣಹಾನಿ ತಪ್ಪಿಸಲು ಹಳ್ಳಿಗಳಲ್ಲಿ ಭೇಟಿ ನೀಡಿ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಲಾಗಿತ್ತು. ಈವರೆಗೂ ಹಳ್ಳಿಗಳಿಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ತಳಕು ಗ್ರಾ.ಪಂ ವ್ಯಾಪ್ತಿಯ ಬಸವನಾಲ ಪಕ್ಕದ ಮನೆಯವರು ನಾಲೆಗೆ ಕೊಳಚೆ ನೀರು ಬಿಡುತ್ತಿದ್ದು, ನೀರು ಮುಂದೆ ಸಾಗದೇ ಅಲ್ಲಿಯೇ ಪಾಚಿಕಟ್ಟಿ ನಿಂತಿದ್ದು ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದಾಗ, ಮನೆಯವರಿಗೆ ನೋಟೀಸ್ ನೀಡಿ ಗ್ರಾ.ಪಂ ಗೆ ಕೈತೊಳೆದು ಕೊಂಡಿದೆ. ಇದರಿಂದ ವಾಂತಿ, ಭೇದಿ, ಜ್ವರದಿಂದ ಅನೇಕರು ಆಸ್ಪತ್ರೆ ಸೇರಿ ಅಪಾಯದಿಂದ ಪಾರಾಗಿದ್ದಾರೆ. ಖಾಸಗಿ ಶುದ್ಧ ನೀರಿನ ಘಟಕದ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗಿ ತೊಂದರೆ ನೀಡುತ್ತಿದ್ದರೂ ಅಧಿಕಾರಿಗಳು ನೀರು ನಿಲ್ಲುವ ಸ್ಥಳದ ಸ್ವಚ್ಚತೆ ಕೈಗೊಂಡಿಲ್ಲವೆಂದು ಬಸವರೆಡ್ಡಿ ಆರೋಪಿಸಿದ್ದಾರೆ.
ಫೋಟೋ: ಬಸವರೆಡ್ಡಿ