ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪೊಲೀಸ್ ಕೆಲಸ ತುಂಬಾ ಪವಿತ್ರವಾದ ಕೆಲಸ, ಎಲ್ಲಿ ಮನುಷ್ಯರಿರುತ್ತಾರೆಯೋ ಅಲ್ಲಿ ಗಲಾಟೆ, ಗಲಭೆಗಳಿರುತ್ತವೆ. ಆದರೆ ಅವೆಲ್ಲವನ್ನು ಹಿಡಿತಕ್ಕೆ ತಂದು ಸಾರ್ವಜನಿಕರಲ್ಲಿ ಶಾಂತಿಯ ಬದುಕು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವುದೇ ಪೊಲೀಸ್ ಇಲಾಖೆಯ ಮುಖ್ಯ ಧ್ಯೇಯ ಎಂದು ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ ಜಿ ಅಭಿಪ್ರಾಯಪಟ್ಟರು.ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೊಲೀಸ್ ಸಹಕಾರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಜನಗಳ ಮಧ್ಯೆ ಉತ್ತಮ ಭಾಂಧವ್ಯ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಹೊಸ ಭವಿಷ್ಯವನ್ನು ಬರೆದು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿ ಮೂಡುಬಿದಿರೆಗೆ ಹೆಮ್ಮೆ ತಂದ ಇವರನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು. ಇದರ ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಒಬ್ಬ ದಕ್ಷ ಅಧಿಕಾರಿ ಇದ್ದರೆ ಅಲ್ಲಿನ ವ್ಯವಸ್ಥೆಗಳು ಉತ್ತಮವಾಗಿರುತ್ತದೆ. ಈ ರೀತಿ ದೇಶ ಕಟ್ಟುವ ಕೆಲಸ ಮಾಡುತ್ತಿರುವ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಆಡಳಿತ ನಿರ್ದೇಶಕರಾದ ಡಾ.ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಶಿಕ್ಷಕ ನಿರಂಜನ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.