ಏ.14ರಿಂದ ಜಿಲ್ಲೆಯಾದ್ಯಂತ ಸಮಾನತೆ ರಥಯಾತ್ರೆ-ಅನಿಲ ಮೆಣಸಿನಕಾಯಿ

KannadaprabhaNewsNetwork |  
Published : Mar 23, 2025, 01:34 AM IST
ಮುಂಡರಗಿ ತಾಲೂಕಿನ ತಾಲೂಕಿನ ಸಿಂಗಟಾಲೂರ ಸುಕ್ಷೇತ್ರದಲ್ಲಿ ಮುಖಂಡ ಅನಿಲ್ ಮೆನಸಿಣಕಾಯಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಏ. 14ರಿಂದ ಬಸವ ಜಯಂತಿವರೆಗೆ ಜಿಲ್ಲಾದ್ಯಂತ ಅವರ ತತ್ವ ಆದರ್ಶಗಳನ್ನು ತಿಳಿಸುವಂತ, ಜಾಗೃತಿ ಸಂದೇಶ ನೀಡುವಂತ ಸಮಾನತೆಯ ರಥಯಾತ್ರೆ ಮತ್ತು ಸಮಾನತೆಯ ಬುತ್ತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಮುಖಂಡ ಅನಿಲ್ ಮೆಣಸಿನಕಾಯಿ ತಿಳಿಸಿದರು.

ಮುಂಡರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಏ. 14ರಿಂದ ಬಸವ ಜಯಂತಿವರೆಗೆ ಜಿಲ್ಲಾದ್ಯಂತ ಅವರ ತತ್ವ ಆದರ್ಶಗಳನ್ನು ತಿಳಿಸುವಂತ, ಜಾಗೃತಿ ಸಂದೇಶ ನೀಡುವಂತ ಸಮಾನತೆಯ ರಥಯಾತ್ರೆ ಮತ್ತು ಸಮಾನತೆಯ ಬುತ್ತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಮುಖಂಡ ಅನಿಲ್ ಮೆಣಸಿನಕಾಯಿ ತಿಳಿಸಿದರು.

ಅವರು ಶನಿವಾರ ತಾಲೂಕಿನ ಸಿಂಗಟಾಲೂರ ಸುಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ವಿಭಿನ್ನ ರೀತಿಯಲ್ಲಿ ವಿಶಿಷ್ಟವಾದ ಸಮಾನತೆಯ ರಥಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಜಾತಿ, ರಾಜಕಾರಣ ಹೊರತು ಪಡಿಸಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಏ.14ರಂದು ಗದಗನಲ್ಲಿರುವ ಬಸವೇಶ್ವರ ಪುತ್ಥಳಿಯಿಂದ ಕಾರ್ಯಕ್ರಮ ಚಾಲನೆಗೊಂಡು ಜಿಲ್ಲಾದ್ಯಂತ ಸಂಚರಿಸಲಿದೆ ಎಂದರು.

ಏ.14ರಂದು ಶ್ರಮಿಕ ವರ್ಗದವರನ್ನು ಮತ್ತು ಪೌರಕಾರ್ಮಿಕರನ್ನು ವಿಶೇಷ ವಾಹನದಲ್ಲಿ ಮೆರವಣಿಗೆ ನಡೆಸಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಎಲ್ಲರೊಂದಿಗೆ ಅಂಬೇಡ್ಕರ್ ತತ್ವಾದರ್ಶದ ವಿಚಾರಧಾರೆಗಳನ್ನು ಬೆಸೆಯುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಜನಾಂಗದವರ ಮನೆಯಿಂದ ಬುತ್ತಿ ಸಂಗ್ರಹಿಸಿ ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಿ ಸೇರಿ ಭೋಜನ ಮಾಡುವ ಮೂಲಕ ಸಮಾನತೆ ಬುತ್ತಿಯ ಸಂದೇಶ ಸಾರಲಾಗುತ್ತದೆ ಎಂದರು. ರಾಮ ಮಂದಿರ ನಿರ್ಮಾಣ ಭಾರತೀಯರ ಕನಸಾಗಿತ್ತು. ಅದು ಕಳೆದ ವರ್ಷ ಸಂವಿಧಾನದಡಿ ನ್ಯಾಯಬದ್ಧವಾಗಿ ನ್ಯಾಯಾಲಯದ ಆದೇಶದಂತೆ ನಿರ್ಮಾಣವಾಯಿತು. ರಾಮನನ್ನು ನಾವು ದೇವರನ್ನಾಗಿ ಕಾಣುತ್ತೇವೆ. ಹಾಗೆ ನಮಗೆ ಸಂವಿಧಾನದಡಿ ಭಾರತೀಯರೆಲ್ಲರಿಗೂ ಹೆಚ್ಚಿನ ಶಕ್ತಿ ನೀಡಿದ್ದು ಡಾ.ಬಾಬಾಸಾಹೇಬ್ ಅಂಬೇಡ್ಕರ್. ಸಮಾನತೆ ಸಂದೇಶ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭೀಮ ಮಂದಿರವನ್ನು ಗದಗ ಭಾಗದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಭೀಮ ಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಪ್ರಾರಂಭಿಸುತ್ತಿದ್ದಂತೆ ಗದಗ ತಾಲೂಕಿನ ರೈತರು ತಮ್ಮ ಎರಡು ಎಕರೆ ಜಮೀನು ದಾನ ಕೊಡಲು ಮುಂದಾಗಿದ್ದಾರೆ. ಇಲ್ಲಿ ಭೀಮಮಂದಿರ ನಿರ್ಮಾಣ ಮಾಡುವುದರ ಜೊತೆಗೆ ಸಮಾನತೆಯ ಸಂದೇಶ ಸಾರಿದ ಬುದ್ಧ, ಬಸವಣ್ಣ, ಶಿಶುನಾಳ ಶರಿಪ್, ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸರ ಮಂದಿರ ನಿರ್ಮಿಸುವ ಯೋಜನೆ ಕೈಗೊಳ್ಳಲಾಗಿದ್ದು, ಈ ವಿಷಯ ಕುರಿತು ಸಮಾನತೆ ಮಂದಿರ ಟ್ರಸ್ಟ್ ರಜಿಸ್ಟರ್ ಮಾಡಿ ಮುಂದಿನ ವರ್ಷ ಮಂದಿರ ನಿರ್ಮಿಸಲು ಅಡಿಗಲ್ಲು ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು. ನಮ್ಮ ಮುಂದಿನ ಪೀಳಿಗೆಗೆ ಡಾ. ಅಂಬೇಡ್ಕರ್ ಸೇರಿದಂತೆ ಇಂತಹ ಮಹಾತ್ಮರ ಸಮಾನತೆಯ ತತ್ವ ಸಂದೇಶಗಳನ್ನು ಮುಟ್ಟಿಸುವ ಕಾರ್ಯ ಮಾಡಲಾಗುತ್ತದೆ. ಎಲ್ಲ ಜನಾಂಗದವರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆಸುವ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮದ ಮೂಲಕ ಸಮಾನತೆ ತತ್ತ್ವ ಸಂದೇಶ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರವಿಕಾಂತ ಅಂಗಡಿ, ಉಡಚಪ್ಪ ಹಳ್ಳಿಕೇರಿ, ಮುತ್ತಣ್ಣ ಗದಗಿನ, ವಿಜಯಲಕ್ಷ್ಮೀ ಮಾನ್ವಿ, ಚನ್ನಮ್ಮ ಹುಳಕಣ್ಣವರ, ಚಂದ್ರು ಹರಿಜನ, ವಸಂತ ಪಡಗದ, ಅಶೋಕ ಕರೂರ, ಬಸವರಾಜ ಕುರಿ, ಅಪ್ಪು ನಮಸ್ತೆ, ಪರಮೇಶ ನಾಯಕ, ಶಿವಣ್ಣ ಬಾಳಿಕಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ