ಏಪ್ರಿಲ್‌ 14ರಿಂದ ಸಮಾನತೆ ರಥಯಾತ್ರೆ- ಅನಿಲ ಮೆಣಸಿನಕಾಯಿ

KannadaprabhaNewsNetwork | Published : Apr 2, 2025 1:06 AM

ಸಾರಾಂಶ

ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಏ.14ರಿಂದ 15 ದಿನಗಳ ಕಾಲ ಸಮಾನತೆ ರಥಯಾತ್ರೆ ನಡೆಸಲಾಗುವುದು. ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವುದು.

ಗದಗ: ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಏ.14ರಿಂದ 15 ದಿನಗಳ ಕಾಲ ಸಮಾನತೆ ರಥಯಾತ್ರೆ ನಡೆಸಲಾಗುವುದು. ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವುದು. ಗ್ರಾಮಗಳಲ್ಲಿಯೂ ಈ ರಥಯಾತ್ರೆ ಜರುಗಲಿದೆ. ಪ್ರತಿಯೊಂದು ದಿನ ವಾಲ್ಮೀಕಿ ರಾಮಾಯಣ, ಭಜನೆ, ಅಂಬೇಡ್ಕರ್ ಸಿದ್ಧಾಂತಗಳ ಚರ್ಚೆ ಸೇರಿದಂತೆ ಹಲವು ವಿಷಯಗಳು ಚರ್ಚೆ ನಡೆಸಲಾಗುವುದು. ಪ್ರತಿ ದಿನ ಸಂಜೆ ಬುತ್ತಿ ಜಾತ್ರೆ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆ ಮಂದಿರ ನಿರ್ಮಾಣಕ್ಕೆ ಕುರ್ತಕೋಟಿ ಗ್ರಾಮದಲ್ಲಿ ಜನರು ಎರಡು ಎಕರೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಈ ಸಂಕಲ್ಪ ನೆರವೇರಿಸಲು ಗದಗ, ಬೆಂಗಳೂರು ಸೇರಿದಂತೆ ಹಲವಾರು ದಾನಿಗಳು ಮಂದಿರ ನಿರ್ಮಿಸಲು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಮಂದಿರ ನಿರ್ಮಾಣಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ಸಮಾನತೆ ರಥಯಾತ್ರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ದಾಸರು ಸೇರಿದಂತೆ ಹಲವರ ಪ್ರತಿಮೆಗಳು ಮೆರವಣಿಗೆ ಮಾಡಲಾಗುವುದು. ಜಯಂತಿ ಮಾಡುವ ಮೂಲಕ ಕೇವಲ ಅವರ ಜಯಂತಿ ಮಹನೀಯರನ್ನು ಸ್ಮರಣೆ ಮಾಡಲಾಗುತ್ತದೇ ವಿನಃ, ಅವರ ಸ್ಮರಣೆ ನಿತ್ಯ ನಿರಂತರ ಆಗಬೇಕು. ಹಾಗಾಗಿ ಸಮಾನತೆ ಮಂದಿರ. ಈ ಮಂದಿರವು ಕೇವಲ ಪೂಜಾ ಸ್ಥಾನವಾಗಿ ಮಾಡುತ್ತಿಲ್ಲ. ಇಲ್ಲಿ ಜ್ಞಾನವನ್ನು ಪಸರಿಸುವ ಕಾರ್ಯಕ್ಕೆ ನಾಂದಿ ಹಾಡಲಾಗುತ್ತಿದೆ. ಹಾಗಾಗಿ ಮಂದಿರ ನಿರ್ಮಾಣ ಅನಿವಾರ್ಯ ಇದೆ ಎಂದರು.

ಸಮಾನತೆ ರಥಯಾತ್ರೆಯು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ರಾಜಕೀಯ ಹೊರತುಪಡಿಸಿ ಈ ರಥಯಾತ್ರೆ ನಡೆಸಲಾಗುವುದು. ರಥಯಾತ್ರೆ ಜತೆಗೆ ಬುತ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿಧ ಗ್ರಾಮದಿಂದ ಬುತ್ತಿಯನ್ನು ಸಮರ್ಪಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಈ ಯಾತ್ರೆಗೆ ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರಿಗೂ ಆಹ್ವಾನ ಇದೆ ಎಂದರು.

ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಜರುಗಿವೆ. ಕಳೆದ ವರ್ಷ ಅಂಬೇಡ್ಕರ್ ಜಯಂತಿ ದಿನದಂದೇ ಸಮಾನತೆ ಮಂದಿರ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಅಖಿಲ ಭಾರತ ಸಮಾನತೆ ಪ್ರತಿಷ್ಠಾನದ ವತಿಯಿಂದ ಸಮಾನತೆ ರಥಯಾತ್ರೆ 15 ದಿನಗಳ ಕಾಲ ಜಿಲ್ಲೆಯಾದ್ಯಂತ ನಡೆಸಲಿದ್ದೇವೆ. ಕನಕದಾಸ, ಶಿಶುನಾಳ ಶರೀಫ್ ಸೇರಿದಂತೆ ಹಲವು, ದಾರ್ಶನಿಕರ ಮಹನೀಯರ ಪ್ರತಿಮೆಗಳ ಮೆರವಣಿಗೆ ನಡೆಲಸಾಗುವುದು ಎಂದರು. ರಾಘವೇಂದ್ರ ಯಳವತ್ತಿ, ಪರಮೇಶ ಲಮಾಣಿ, ಮುತ್ತು ಮುಷಿಗೇರಿ, ವಸಂತ ಪಡಗದ ಇತರರು ಇದ್ದರು.

Share this article