ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ’ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ’ಗಳಿಗೆ ಹಮ್ಮಿಕೊಳ್ಳಲಾಗಿದ್ದ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸತಿಪದ್ದತಿ ಕಾಲದಿಂದಲೂ ಬಾಲ್ಯವಿವಾಹ ಸಮಾಜಕ್ಕೆ ಕಳಂಕವಾಗಿ ಪರಿಣಮಿಸಿದೆ. ಬಾಲ್ಯವಿವಾಹ ನಿರ್ಮೂಲನೆಗೆ ಸರ್ಕಾರದಿಂದ ಹಲವು ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ ಅಲ್ಲಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬಾಲ್ಯವಿವಾಹದ ಪರಿಣಾಮಗಳ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನ ವೃದ್ಧಿಸಿಕೊಳ್ಳಬೇಕು. ಮಕ್ಕಳಿಗೆ ಸುರಕ್ಷತೆ ಒದಗಿಸಬೇಕಿದೆ. ಪೋಷಕರು ಚಿಂತನಾ ಸಾಮರ್ಥ್ಯ ಬೆಳೆಸಿಕೊಂಡು ನೆರೆಹೊರೆಯವರಿಗೂ ತಿಳಿಹೇಳಬೇಕು. ಸುಶಿಕ್ಷಿತ ಸಮಾಜ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶ ನಿರ್ಮಾಣವಾಗಬೇಕು. ಆಗಮಾತ್ರ ಬಾಲ್ಯವಿವಾಹ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.ಆರಂಭದಲ್ಲಿ ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷ ಆಗಿದ್ದರೂ ಇನ್ನೂ ನಾವು ಬಾಲ್ಯವಿವಾಹದ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಬಾಲ್ಯವಿವಾಹ ನಿರ್ಮೂಲನೆಗೆ ಹೆಚ್ಚಿನ ಅರಿವು ಮೂಡಿಸುವ ಚಟುವಟಿಕೆಗಳು ನಡೆಯುತ್ತಿದ್ದರೂ ಆಗಾಗ್ಗೆ ಬಾಲ್ಯವಿವಾಹ ಜರುಗುತ್ತಿವೆ. ಪ್ರಕರಣಗಳು ಹೆಚ್ಚಿದಷ್ಟು ಪರಿಣಾಮಕಾರಿ ಯೋಜನೆ ರೂಪಿಸಲು ಸಹಾಯಕವಾಗಲಿದೆ.
ಜಿಲ್ಲೆಯ ೧೩೦ ಗ್ರಾಮಪಂಚಾಯಿತಿಗಳಲ್ಲಿ ಸಾಕಷ್ಟು ಮಹಿಳಾ ಅಧ್ಯಕ್ಷರು, ಸದಸ್ಯರಿದ್ದಾರೆ. ಎಲ್ಲಾ ಗ್ರಾಮಗಳು, ವಾರ್ಡ್‌ಗಳಲ್ಲಿ ಬಾಲ್ಯವಿವಾಹ ನಿರ್ಮೂಲನೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಆ ಮೂಲಕ ಮೊದಲು ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕೈಗೊಳ್ಳಬೇಕು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ’ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ’ಗಳಿಗೆ ಬಾಲ್ಯವಿವಾಹ ತಡೆಗಟ್ಟುವ ಕುರಿತ ಸಾಮರ್ಥ್ಯಾಭಿವೃದ್ಧಿ ವಿಚಾರ ಗೋಷ್ಠಿಗಳು ನಡೆದವು.