ಗುತ್ತಲ: ದುಷ್ಟತನ ಸಂಹಾರದ ಸಂಕೇತವಾಗಿರುವ ದಸರಾ ಕಾರ್ಯಕ್ರಮದಲ್ಲಿ ನವ ದುರ್ಗೆಯರ ಆರಾಧನೆಯಿಂದ ಸಮಾಜದಲ್ಲಿನ ದುಷ್ಟತನದೊಂದಿಗೆ ನಮ್ಮೊಳಗಿರುವ ದುಷ್ಟತನವು ಸಹ ಸಂಹಾರ ಆಗಲಿ ಎಂದು ದುರ್ಗಾ ದೇವಿಯಲ್ಲಿ ಬೇಡಿಕೊಳ್ಳಬೇಕೆಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಲ್ಮಠದ ಗುರುಸಿದ್ದ ಸ್ವಾಮಿಜಿ ಮಾತನಾಡಿ, ದಸರಾ ಕಾರ್ಯಕ್ರಮ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ದೇಶಾದ್ಯಂತ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಗುತ್ತಲ ದಸರಾ ಸಮಿತಿಯವರು ವಿವಿಧ ಅರ್ಥ ಪೂರ್ಣ ಕಾರ್ಯಕ್ರಮಗಳ ಮೂಲಕ ಗುತ್ತಲದ ವೈಭವವನ್ನು ಪ್ರತಿ ವರ್ಷ ಎಲ್ಲ ಜನತಗೆ ಪ್ರಚುರ ಪಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಉತ್ಸವ ಮೂರ್ತಿಯೊಂದಿಗೆ ಪ್ರತಿಷ್ಠಾಪನೆಯ ದುರ್ಗಾ ದೇವಿಯ ಭವ್ಯ ಮೆರವಣಿಗೆ ಸಂಪ್ರದಾಯಿಕ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿಸಿ ಅಂತಿಮವಾಗಿ ಎಲೆ ಪೇಟೆಯಲ್ಲಿನ ಚೌವತ ಕಟ್ಟಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮುನ್ನ ಪಿಎಸ್‌ಐ ಬಸನಗೌಡ ಬಿರಾದಾರ ಶ್ರೀದುರ್ಗಾ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು.ಮೆರವಣಿಗೆಯಲ್ಲಿ ದಸರಾ ಉತ್ಸವ ಸಮಿತಿ ಚನ್ನಪ್ಪ ಕಲಾಲ, ಉಪಾಧ್ಯಕ್ಷ ಶ್ರೀನಿವಾಸ ತೇಲ್ಕರ, ಖಜಾಂಚಿ ರಮೇಶ ಮಠದ, ಶಿವಯೋಗೆಪ್ಪ ಹಾಲಗಿ, ಕುಮಾರ ಚಿಗರಿ, ನವೀನ ದಾಮೋದರ, ದಸರಾ ಉತ್ಸವ ಸಮಿತಿ ಸದಸ್ಯರು, ಪ.ಪಂ ಸದಸ್ಯರು, ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಯುವಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.ಗುತ್ತಲ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಪ್ರದೀಪ ಸಾಲಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು,ವೀರಯ್ಯ ಪ್ರಸಾಧಿಮಠ ಸ್ವಾಗತಿಸಿದರು. ಎಂ.ಬಿ. ಕೋಡಬಾಳ ಕಾರ್ಯಕ್ರಮ ನಿರೂಪಿಸಿದರು.