ಶೀಘ್ರ ಚಿಕಿತ್ಸೆಯಿಂದ ಕ್ಷಯ ನಿರ್ಮೂಲನೆ ಸಾಧ್ಯ: ಡಾ.ನಟರಾಜ್

KannadaprabhaNewsNetwork |  
Published : Mar 26, 2024, 01:18 AM IST
ಪೊಟೋ: 25ಎಸ್‌ಎಂಜಿಕೆಪಿ02ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಿಎಚ್‌ಒ ಡಾ.ನಟರಾಜ್ ಮಾತನಾಡಿದರು. | Kannada Prabha

ಸಾರಾಂಶ

ಕ್ಷಯರೋಗ ಶೀಘ್ರ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ರೋಗವನ್ನು ನಿರ್ಮೂಲನೆ ಮಾಡಬಹುದು. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ : ಜಿಲ್ಲೆಯಲ್ಲಿ 2023ರಲ್ಲಿ 53,713 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ 1303 ಕ್ಷಯರೋಗಿಗಳನ್ನು ಪತ್ತೆಹಚ್ಚಿ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಡಿಎಚ್‌ಒ ಡಾ.ನಟರಾಜ್ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ಷಯರೋಗ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

48 ಎಂಡಿಆರ್ ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ. ಚಿಕಿತ್ಸೆಗೊಳಪಡಿಸಿದ ಎಲ್ಲಾ ರೋಗಿಗಳಿಗೆ ಚಿಕಿತ್ಸಾ ಅವಧಿಯಲ್ಲಿ 500 ರು. ಅನ್ನು ಪೌಷ್ಟಿಕ ಆಹಾರಕ್ಕಾಗಿ ನೀಡಲಾಗುತ್ತಿದೆ. ಅಲ್ಲದೇ ನಿಕ್ಷಯ ಮಿತ್ರ ಯೋಜನೆಯಡಿ ದಾನಿಗಳಿಂದ ಪೌಷ್ಟಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕ್ಷಯರೋಗ ಶೀಘ್ರ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ರೋಗವನ್ನು ನಿರ್ಮೂಲನೆ ಮಾಡಬಹುದು. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಉಪಯೋಗ ಪಡೆಯಬೇಕು ಎಂದರು.

ಎಂಡಿಆರ್ ರೋಗಿಗಳ ಶೀಘ್ರ ಪತ್ತೆಗಾಗಿ ಸಿಬಿನ್ಯಾಟ್ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಸೊರಬ, ಹೊಸನಗರ, ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಟ್ರೂನ್ಯಾಟ್ ಪ್ರಾರಂಭಿಸಲಾಗಿದ್ದು, ಇದರಿಂದ ಟಿಬಿ ಮತ್ತು ಎಂಡಿಆರ್ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಜಿಲ್ಲೆಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಮತ್ತು ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಹೈರಿಸ್ಕ್ ಏರಿಯಾಗಳಲ್ಲಿ, ಗಣಿಗಾರಿಕೆ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ಎಚ್‍ಐವಿ ಬಾಧಿತರಲ್ಲಿ, ಮಧುಮೇಹಿಗಳಲ್ಲಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷ ಕ್ಷಯರೋಗ ನಿರ್ಮೂಲನೆಗೆ ಜಿಲ್ಲೆಯ 60 ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತ ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿದ್ದು, ಈ ಗ್ರಾಪಂಗಳಲ್ಲಿ ಪಿಡಿಒ, ಎಲ್ಲಾ ಪಂಚಾಯತ್ ಸದಸ್ಯರುಗಳಿಗೆ ತರಬೇತಿ ನೀಡಿ ಕ್ಷಿಪ್ರ ಕಾರ್ಯಪಡೆ ರಚನೆ ಮಾಡಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿರುತ್ತದೆ. ಅಲ್ಲದೇ ಕ್ಷಯದ ಕುರಿತು ಅರಿವು ಮೂಡಿಸಲು ಬೀದಿ ನಾಟಕಗಳು, ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ರೇಡಿಯೋ ಸಂದರ್ಶನಗಳನ್ನು ನಡೆಸಲಾಗುತ್ತಿದೆ ಎಂದರು.

ಕ್ಷಯರೋಗ ನಿರ್ಮೂಲನೆಗೆ ಜಿಲ್ಲೆ ಆಯ್ಕೆಯಾಗಿರುವುದರಿಂದ ಕ್ಷಯ ಪ್ರಕರಣಗಳಿರುವ ಮನೆಗಳಲ್ಲಿ ಸಂಪರ್ಕದಲ್ಲಿರುವವರಿಗೆ ಐಜಿಆರ್‌ಎ ರಕ್ತ ಪರೀಕ್ಷೆ ಮುಖಾಂತರ ಟಿಬಿ ಸೋಂಕನ್ನು ಕಂಡು ಹಿಡಿಯುವ ಪರೀಕ್ಷೆ ಶೀಘ್ರದಲ್ಲಿ ಸಿಮ್ಸ್ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಪರೀಕ್ಷೆಯಿಂದ ರಕ್ತದಲ್ಲಿ ಟಿಬಿ ಬ್ಯಾಕ್ಟೀರಿಯಾ ಕಂಡುಬಂದಲ್ಲಿ ಮುಂದೆ ಟಿಬಿ ಬಾರದಂತೆ ಕಿಮೋಪ್ರೊಲ್ಯಾಕ್ಸಿಸ್ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು ಡಾ.ದಿನೇಶ್ ಮಾತನಾಡಿ, ಕ್ಷಯ ರೋಗ ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಭಾರತದಲ್ಲಿ ಪ್ರತಿ ದಿನ ಸುಮಾರು 6 ಸಾವಿರ ಜನರಲ್ಲಿ ಕ್ಷಯರೋಗ ಕಂಡು ಬರುತ್ತಿದ್ದು, ಸುಮಾರು 600 ಜನ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

ಸತತ ಎರಡು ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವುದು, ಕಫದಲ್ಲಿ ರಕ್ತ, ಎದೆನೋವು, ಹಸಿವಾಗದಿರುವುದು ಇತರೆ ರೋಗ ಲಕ್ಷಣಗಳು ಕಂಡುಬರುತ್ತವೆ. ಕ್ಷಯರೋಗಿಗಳು ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಉಗಿಯಬಾರದು. ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಿಸಬೇಕು. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಐಎಂಎ ಅಧ್ಯಕ್ಷ ಡಾಕ್ಟರ್ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿಎಚ್‌ಒ ಡಾ.ಚಂದ್ರಶೇಖರ್, ಡಿಎಲ್‍ಒ ಡಾ.ಕಿರಣ್, ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳ ಕಚೇರಿ ಸಿಬ್ಬಂದಿ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ನರ್ಸಿಂಗ್‌ ಕಾಲೇಜ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಡಿಎಚ್‍ಒ ಕಚೇರಿಯಿಂದ ಆರಂಭಗೊಂಡ ಜಾಗೃತಿ ಜಾಥಾ ಬಿ.ಎಚ್‌.ರಸ್ತೆ ಮೂಲಕ ಗೋಪಿ ಸರ್ಕಲ್ ಮಾರ್ಗದಲ್ಲಿ ಸಾಗಿ ಬಂದು ಐಎಂಎ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ