ಖಾಕಿಯಿಂದ ಎಸ್ಕೇಪ್‌ ಆಗಲು ಹೋಗಿಮೂಳೆ ಮುರಿದುಕೊಂಡ ಸ್ಪಾಟ್‌ ನಾಗ

KannadaprabhaNewsNetwork |  
Published : May 27, 2026, 04:30 AM IST
ಕಳ್ಳತನ  | Kannada Prabha

ಸಾರಾಂಶ

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿಶೀಟರ್‌ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿ ಸೊಂಟದ ಮೂಳೆ ಮುರಿದುಕೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿಶೀಟರ್‌ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿ ಸೊಂಟದ ಮೂಳೆ ಮುರಿದುಕೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಾಗರಾಜ್‌ ಅಲಿಯಾಸ್‌‍ ಸ್ಪಾಟ್‌ ನಾಗ ಗಾಯಗೊಂಡಿರುವ ಕುಖ್ಯಾತ ರೌಡಿ. ಪ್ರಕರಣವೊಂದರ ಸಂಬಂಧ ಬಗಲಗುಂಟೆ ಠಾಣೆ ಪೊಲೀಸರು ನಾಗನನ್ನು ಬಂಧಿಸಲು ಹೋದಾಗ ಪೊಲೀಸರನ್ನು ತಳ್ಳಿ ತಪ್ಪಿಸಿಕೊಳ್ಳಲು ಹೋದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014ರಲ್ಲಿ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ರೌಡಿ ಸ್ಪಾಟ್‌ ನಾಗ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈ ನಡುವೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಈತ ಹೊಸದೊಂದು ಮನೆ ಕಟ್ಟಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಗಲಗುಂಟೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಲು 5 ದಿನಗಳ ಹಿಂದೆ ಈ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಅಲರ್ಟ್‌ ಆದ ಸ್ಪಾಟ್‌ ನಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಹಿಡಿಯಲು ಬಂದ ಕರ್ತವ್ಯ ನಿರತ ಪೊಲೀಸ್‌‍ ಸಿಬ್ಬಂದಿಯನ್ನು ತಳ್ಳಿ, ಅವರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದ. ಪೊಲೀಸರಿಗೆ ಬೆದರಿಕೆ ಹಾಕಿ, ಅಲ್ಲಿಂದ ಪರಾರಿಯಾಗುವ ಧಾವಂತದಲ್ಲಿ ನಿರ್ಮಾಣ ಹಂತದ ಕಟ್ಟಡ ಮೇಲಿಂದ ಕೆಳಗೆ ಧುಮುಕಿದ್ದಾನೆ.

ಕಟ್ಟಡದಿಂದ ಹಾರಿದ ರಭಸಕ್ಕೆ ಸ್ಪಾಟ್‌ ನಾಗನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆತನಿಗೆ ಎದ್ದು ಓಡಲು ಸಾಧ್ಯವಾಗಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಿಲ್ಡಿಂಗ್‌ನಿಂದ ಬಿದ್ದ ಕಾರಣ ಆತನ ಸೊಂಟದ ಮೂಳೆ ಜಾಯಿಂಟ್‌ ಕಂಪ್ರೆಷನ್‌ (ಸೊಂಟದ ಮೂಳೆ ಜರುಗುವಿಕೆ) ಆಗಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲೇ ಆತನಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ನೀಡಿದ ದೂರಿನನ್ವಯ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ರೌಡಿ ಸ್ಪಾಟ್‌ ನಾಗನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಸ್ಪಾಟ್‌ ನಾಗ ಬಸವೇಶ್ವರ ನಗರ ಠಾಣೆಯ ರೌಡಿಶೀಟರ್‌ ಆಗಿದ್ದು, ಒಂಟಿ ಮಹಿಳೆಯರನ್ನು ಟಾರ್ಗೇಟ್‌ ಮಾಡಿ ಚಿನ್ನಾಭರಣ ದೋಚುತ್ತಿದ್ದ. ಒಂಟಿ ಮಹಿಳೆಯಿಂದ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿದ್ದರ ಬಗ್ಗೆ ಕೆಲ ವರ್ಷಗಳ ಹಿಂದೆ ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದ ರಾಜಗೋಪಾಲನಗರ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಜೆ ಧಾರಾಕಾರ ಮಳೆಗೆ 57 ಮರಗಳು ಧರೆಗೆ
ಕಾಶಿಗೆ ಹೋಗಿದ್ದ ಅಧಿಕಾರಿ ಮನೇಲಿಚಿನ್ನ ದೋಚಿದ್ದ ಇಬ್ಬರು ಕಳ್ಳರ ಸೆರೆ