ಭಾರೀ ಬೆಂಬಲಿಗರೊಂದಿಗೆ ಈಶ್ವರಪ್ಪ ಉಮೇದುವಾರಿಕೆ

KannadaprabhaNewsNetwork | Published : Apr 13, 2024 1:01 AM

ಸಾರಾಂಶ

ಬೃಹತ್‌ ಸಂಖ್ಯೆಯ ಬೆಂಬಲಿಗರೊಂದಿಗೆ ಭಾರೀ ಮೆರವಣಿಗೆ ನಡೆಸುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣಕ್ಕಿಳಿದಿರುವ ಈಶ್ವರಪ್ಪ ನಗರದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣಕ್ಕಿಳಿಯುವ ಮೂಲಕ ರಾಜ್ಯದ ಗಮನ ಸೆಳೆದಿರುವ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಶುಕ್ರವಾರ ಭಾರೀ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ನಗರದ ಶಕ್ತಿ ದೇವತೆಗಳಾದ ಕೋಟೆ ಶ್ರಿ ಸೀತಾರಾಂಜನೇಯ ದೇವಸ್ಥಾನ ಹಾಗೂ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ತರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಳಿಕ ರಾಮಣ್ಣಶ್ರೇಷ್ಠಿ ಪಾರ್ಕ್‌ ಬಳಿ ಜಮಾಯಿಸಿದ ಕೆ. ಎಸ್‌. ಈಶ್ವರಪ್ಪ ಅಭಿಮಾನಿಗಳು, ಬೆಂಬಲಿಗರು ಗಣಪತಿ‌ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಮುಗಿಸಿ ಕೇಸರಿ ಬಾವುಟ ಹಿಡಿದು ಜೈ ಶ್ರೀರಾಮ್‌ ಘೋಷಣೆಯೊಂದಿಗೆ ಬೃಹತ್‌ ಮೆರವಣಿಗೆ ಆರಂಭಗೊಂಡಿತು.

ಗಾಂಧಿಬಜಾರ್‌, ಅಮೀರ್‌ ಅಹಮ್ಮದ್‌ ವೃತ್ತ, ಸೀನಪ್ಪ ಶೆಟ್ಟಿ (ಗೋಪಿವೃತ್ತ) ವೃತ್ತ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈಶ್ವರಪ್ಪರಿಂದ ಶಕ್ತಿ ಪ್ರದರ್ಶನ: ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಗಾಂಧಿ ಬಜಾರ್‌ನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಜನ ಕಾಣಿಸುತ್ತಿದ್ದ ರು. ಸುಡು ಬಿಸಿಲನ್ನೂ ಲೆಕ್ಕಿಸದೇ ಈಶ್ವರಪ್ಪ ಅಭಿಮಾನಿಗಳು, ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರಭಕ್ತರ ಬಳಗ ಹೆಸರಿನ ವಾಹನದಲ್ಲಿ ರಾಮ, ಹನುಮ ಮತ್ತು ಕಪಿಸೇನೆ ಸೇರಿದಂತೆ ವಿವಿಧ ವೇಷಧಾರಿಗಳು, ವಿವಿಧ ವಾದ್ಯಗಳೊಂದಿಗೆ ಕಾಣಿಸಿಕೊಂಡರು.

ವಾಹನದಲ್ಲಿ ಮೋದಿ ಹಾಗೂ ಈಶ್ವರಪ್ಪನವರ ಫೋಟೋವುಳ್ಳ ಫ್ಲೆಕ್ಸ್ ಅನ್ನು ಅಳವಡಿಸಲಾಗಿತ್ತು. ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿ ದರು. ಮೋದಿ ಮತ್ತು ಈಶ್ವರಪ್ಪನವರು ಇರುವ ಬಾವುಟಗಳು ರಾರಾಜಿಸಿದವು.

ಮಾಜಿ ಸಚಿವ ಕೆ.ಎಸ್.ಈ‍ಶ್ವರಪ್ಪ, ಪುತ್ರ ಕೆ.ಈ.ಕಾಂತೇಶ್‌ ಮತ್ತು ಬೆಂಬಲಿಗರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಯ ಸಮಯವಾದ್ದರಿಂದ ಈಶ್ವರಪ್ಪ ಅವರು ಮೆರವಣಿಗೆಯ ಅರ್ಧದಲ್ಲೇ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಈಶ್ವರಪ್ಪ ಅವರೊಂದಿಗೆ ಪತ್ನಿ ಜಯಲಕ್ಷ್ಮಿ, ಮಹಾಲಿಂಗ ಶಾಸ್ತ್ರಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಉಮಾಮೂರ್ತಿ ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಒಳಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ನಾಮಪತ್ರ ಸ್ವೀಕರಿಸಿದರು.ಅಚ್ಚರಿ ಮೂಡಿಸಿದ ಮೋದಿ ತದ್ರೂಪಿ

ಈಶ್ವರಪ್ಪ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಅವರ ತದ್ರೂಪಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದರು.

ಎಲ್ಲರತ್ತ ಕೈ ಬೀಸುತ್ತ, ನಮಸ್ಕರಿಸುತ್ತ ತೆರದ ವಾಹನದಲ್ಲಿ ಸಾಗಿದರು. ಜನರು ಮೋದಿ ಅವರೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸುವಂತೆ ಇತ್ತು. ಮೋದಿ ಅವರನ್ನು ಹೋಲುವ ಇವರು ಉಡುಪಿ ಜಿಲ್ಲೆ ಹಿರಿಯಡ್ಕದ ಸದಾನಂದ ನಾಯಕ್‌. ಈಶ್ವರಪ್ಪ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಸದಾನಂದ ನಾಯಕ್‌ ಅವರನ್ನು ಕರೆತಂದಿದ್ದು ಗಮನ ಸೆಳೆಯಿತು. ಇನ್ನು, ಮೋದಿಯೇ ಬಂದು ಇಲ್ಲಿ ಆಶೀರ್ವಾದ ಮಾಡಿದಂತಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ನನ್ನ ಗೆಲುವು ಶತಸಿದ್ಧ: ಈಶ್ವರಪ್ಪ

ಶಿವಮೊಗ್ಗ: ಸುಡು ಬಿಸಿಲನ್ನೂ ಲೆಕ್ಕಿಸದೇ ನನ್ನನ್ನು ಬೆಂಬಲಿಸಲು ಕ್ಷೇತ್ರದ ಎಲ್ಲ ತಾಲೂಕಿನಿಂದ ಇಷ್ಟೊಂದು ಸಂಖ್ಯೆಯಲ್ಲಿ ನೀವೆಲ್ಲ ಬಂದಿರುವುದು ನೋಡಿದರೆ ನನ್ನ ಗೆಲುವು ಶತಸಿದ್ಧ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶುಕ್ರವಾರ ನಾಮಪತ್ರ ಸಲ್ಲಿಕೆ ಬಳಿಕ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಕಾರ್ಯಕರ್ತರು ಇಲ್ಲಿಗೆ ಬರಲು ಬಸ್‌ ಬುಕ್ ಮಾಡಿದರೆ ಬಸ್‌ ಮಾಲೀಕರನ್ನೇ ಬುಕ್‌ ಮಾಡಿ ಕಾರ್ಯಕರ್ತರು ಬರುವುದನ್ನು ತಡೆಯುವ ಪ್ರಯತ್ನ ಇನ್ನೊಂದು ಕಡೆ ನಡೆಯಿತು. ಆದರೂ ಇಷ್ಟೊಂದು ಸಂಖ್ಯೆಯಲ್ಲಿ ನೀವೆಲ್ಲ ಸೇರಿರುವುದು ನನ್ನ ಪುಣ್ಯ. ಸಾಗರೋಪಾದಿಯಲ್ಲಿ ಬಂದ ನಿಮಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ ಹುಮ್ಮಸ್ಸು ನೋಡುತ್ತಿದ್ದರೆ ಉಳಿದ ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಳ್ಳುವಂತೆ ಕಾಣುತ್ತಿದೆ ಎಂದರು.

ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನ ಬಂದಿದ್ದೀರಿ. ನೀವೆಲ್ಲ ಪ್ರತಿ ಮನೆಗೆ ಹೋಗಿ ನನಗೆ ಮತ ಹಾಕಲು ಹೇಳಿ. ಏ.19 ಕ್ಕೆ ನನ್ನ ಸ್ಪರ್ಧೆಯ ಗುರುತು ಬರುತ್ತದೆ. ಈ ಬಾರಿ ಚುನಾವಣೆಯಲ್ಲಿ ನನಗೆ ಗೆಲ್ಲಿಸಿ ಮೋದಿಯವರನ್ನು ಪ್ರಧಾನಿ‌ ಮಾಡಲು ದೆಹಲಿಗೆ ತೆರಳಿ ಕೈ ಎತ್ತಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಮಾತನಾಡಿ, ಈಶ್ವರಪ್ಪ ಸ್ಪರ್ಧೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ, ಅವರ ಸ್ಪರ್ಧೆಯ ಉದ್ದೇಶವನ್ನು ನಾನಷ್ಟೇ ಅಲ್ಲ ಬೇರೆ ಬೇರೆ ಪಕ್ಷದ ಕಾರ್ಯಕರ್ತರೂ ಒಪ್ಪಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ನಾನು ಕೂಡ ಅವರನ್ನು ಬೆಂಬಲಿಸಿ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

ಸಭೆಯಲ್ಲಿ ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್‌, ಹಿಂದೂ ಸಂಘಟನಾ ಮುಖಂಡ ಶ್ರೀಧರ್‌ ಬಿಜ್ಜೂರ್‌, ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ್‌, ಆರತಿ ಆ.ಮ.ಪ್ರಕಾಶ್‌, ಸುವರ್ಣ ಶಂಕರ್‌ ಸೇರಿದಂತೆ ಇದ್ದರು.

ಸ್ವತಂತ್ರ ಅಭ್ಯರ್ಥಿ ಈಶ್ವರಪ್ಪ ₹ 33.5 ಕೋಟಿ ಆಸ್ತಿ ಒಡೆಯ

ಶಿವಮೊಗ್ಗ: ಬಿಜೆಪಿಯಿಂದ ಬಂಡಾಯ ಕಹಳೆ ಊದಿರುವ, ಸಧ್ಯ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್‌.ಈಶ್ವರಪ್ಪ ಅವರ ಒಟ್ಟು ಆಸ್ತಿ ಅವರೇ ಘೋಷಿಸಿಕೊಂಡಿರುವಂತೆ 33.50 ಕೋಟಿ ರು.ಗಳಾಗಿದೆ.ಬಿಕಾಂ ಪದವೀಧರರಾಗಿರುವ ಈಶ್ವರಪ್ಪ ಅವರ ಬಳಿ ಸದ್ಯ ಅವರ ಬಳಿ 8.5 ಕೋಟಿ ರು. ಚರಾಸ್ತಿ ಹೊಂದಿದ್ದು, 25.45 ಕೋಟಿ ರು. ಸ್ಥಿರಾಸ್ತಿ ಹೊಂದಿದ್ದಾರೆ. ಉಳಿದಂತೆ 48.50 ಲಕ್ಷ ರು. ಮೌಲ್ಯದ ಬೆಳ್ಳಿ ಮತ್ತು ಬಂಗಾರವನ್ನು ಈಶ್ವರಪ್ಪ ಮತ್ತವರ ಪತ್ನಿ ಒಟ್ಟಾಗಿ ಹೊಂದಿದ್ದಾರೆ.ಈಶ್ವರಪ್ಪ ಮತ್ತು ಅವರ ಪತ್ನಿ ಜಯಲಕ್ಷೀ ಅವರ ಬಳಿ ಯಾವುದೇ ವಾಹನವಿಲ್ಲ. ಅವರ ಮೇಲೆ 6.57 ಕೋಟಿ ರು. ಸಾಲವಿದೆ. ಅವರ ಮೇಲೆ ಸದ್ಯ ಯಾವುದೇ ಕ್ರಿಮಿನಲ್‌ ಪ್ರಕರಣವೂ ಇಲ್ಲ. ಇದ್ದ ಐದು ಮೊಕದ್ದಮೆಗಳಿಂದ ಖುಲಾಸೆಗೊಂಡಿದ್ದಾರೆ.25 ಲಕ್ಷ ರೂ. ನಗದು: ಈಶ್ವರಪ್ಪ ಬಳಿ 25 ಲಕ್ಷ ರು. ಮತ್ತು ಪತ್ನಿ ಜಯಲಕ್ಷ್ಮೀ ಅವರ ಬಳಿ 2 ಲಕ್ಷ ರು. ಇದೆ. ಬ್ಯಾಂಕ್‌ ನ ಉಳಿತಾಯ ಖಾತೆಯಲ್ಲಿ 7.16 ಲಕ್ಷ ರು. ಹಣವಿದೆ.ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ: ವಿವಿಧ ಸಂಸ್ಥೆಗಳಲ್ಲಿ ಈಶ್ವರಪ್ಪ ಅವರು 4.45 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಈಶ್ವರಪ್ಪನವರು ಹೆಂಡತಿಗೆ 15 ಲಕ್ಷ ರು. ಸೇರಿದಂತೆ ವಿವಿಧ ಸಂಸ್ಥೆಗಳಿಗೆ 99.27 ಲಕ್ಷ ರು. ಸಾಲ ನೀಡಿದ್ದಾರೆ. ಇವರಿಗೆ ಬಾಡಿಗೆ ಸೇರಿದಂತೆ 1.16 ಕೋಟಿ ರು. ಬಾಕಿ ಬರಬೇಕಿದೆ.ಕೃಷಿ, ವಾಣಿಜ್ಯ ಭೂಮಿ: ಈಶ್ವರಪ್ಪ ಅವರ ಬಳಿ ಒಟ್ಟು 22.35 ಕೋಟಿ ರು. ಮತ್ತು ಪತ್ನಿ ಜಯಲಕ್ಷ್ಮಿಅವರ ಹೆಸರಿನಲ್ಲಿ 3.10 ಕೋಟಿ ರು.ಸೇರಿದಂತೆ ಒಟ್ಟು 25.45 ಕೋಟಿ ರು. ಮೌಲ್ಯದ ಕೃಷಿ ಮತ್ತು ವಾಣಿಜ್ಯ ಭೂಮಿಯಿದೆ.

Share this article