ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈಶ್ವರಪ್ಪ ರಾಜಕೀಯ ರಂಗದ ಅದ್ಭುತ ನಟ. ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿದರೆ, ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಟುಂಬ ರಾಜಕಾರಣದ ಹೆಸರನ್ನು ಹೇಳಿ ತಮ್ಮ ಕುಟುಂಬವನ್ನು ಹೇಗೆ ರಾಜಕಾರಣಕ್ಕೆ ತರಬೇಕು ಎಂದು ಈಶ್ವರಪ್ಪರಿಗೆ ಗೊತ್ತಿದೆ. ಕಾಂತೇಶ್‌ಗೆ ಸಾಮರ್ಥ್ಯ ಇದ್ದಿದ್ದರೆ ಅವರ ಅಪ್ಪ ಯಾಕೆ ಇಷ್ಟು ಹೊಡೆದಾಟ ಮಾಡಬೇಕಿತ್ತು ಎಂದರು.
ಹಿಂದುಳಿದವರ ಹೆಸರಿನಲ್ಲಿ ಈಶ್ವರಪ್ಪ ಲಾಭ ಪಡೆದಿದ್ದಾರೆ ಹೊರತು, ಹಿಂದುಳಿದವರಿಗೆ ಏನನ್ನು ಮಾಡಿಲ್ಲ. ಈಶ್ವರಪ್ಪನವರ ಮಗನಿಗೆ ಟಿಕೆಟ್ ಕೊಟ್ಟಿದ್ದರೆ ಹಿಂದುತ್ವ ಉಳಿತಿತ್ತು ಎಂದು ವ್ಯಂಗ್ಯವಾಡಿದ ಅವರು, ಈಶ್ವರಪ್ಪ ಕಣದಲ್ಲಿ ಉಳಿದರೆ ನನ್ನ ವೋಟು ಗ್ಯಾರಂಟಿ ಎಂದು ಲೇವಡಿ ಮಾಡಿದರು.ಮೋದಿ ಭೇಟಿ ಪ್ರತಿಷ್ಠತೆಯ ಪ್ರದರ್ಶನ:
ಪ್ರಧಾನಿ ನರೇಂದ್ರ ಮೋದಿ ಅವರ ಶಿವಮೊಗ್ಗ ಭೇಟಿ ರಾಜಕೀಯ ಜಾತ್ರೆಯೇ ಹೊರತು, ಜನರ ಬಗ್ಗೆ ಕಾಳಜಿಯಿಂದಲ್ಲ. ಕೇಂದ್ರಕ್ಕೆ ಸಂಬಂಧಪಟ್ಟಂತೆ ವಿಐಎಸ್‌ಎಲ್ ಕಾರ್ಖಾನೆಯ ಸಮಸ್ಯೆ ಇತ್ತು, ಶರಾವತಿ ಸಂತ್ರಸ್ತರ ಸಮಸ್ಯೆ ಇತ್ತು, ಬರಗಾಲವಿತ್ತು. ಅಡಕೆ ಬೆಳೆಗಾರರ ಸಮಸ್ಯೆ ಇತ್ತು. ಇದ್ಯಾವುದರ ಬಗ್ಗೆಯೂ ಅವರು ಮಾತನಾಡಲಿಲ್ಲ. ನೀತಿ ಸಂಹಿತೆ ಇದ್ದರೂ ಅದಕ್ಕೆ ಪೂರಕವಾಗಿಯೇ ಮಾತನಾಡಬಹುದಿತ್ತು. ಆದರೆ, ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಹೋದರು ಅಷ್ಟೇ ಎಂದು ಟೀಕಿಸಿದರು.ಈ ಹಿಂದೆ ಬಿ.ವೈ.ರಾಘವೇಂದ್ರ ವಿಐಎಸ್‌ಎಲ್ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಅಮಿತ್ ಶಾ ಅವರು ನೀಡಿದ ಪತ್ರವನ್ನು ತೋರಿಸಿದರು. ಇದೆಲ್ಲ ಮೂಗಿಗೆ ತುಪ್ಪ ಹಚ್ಚುವ ಕೆಲಸ ಎಂದು ಅಂದೇ ಗೊತ್ತಿತ್ತು. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಒಂದೇ ವಾರದಲ್ಲಿ ಬಗೆಹರಿಸುವುದಾಗಿ ಹೇಳಿದ್ದರು. ಆದರೂ ಬಗೆಹರಿಸಲಿಲ್ಲ. ರಾಜ್ಯ ಭೀಕರ ಬರಗಾಲದಲ್ಲಿದ್ದರೂ, ಪ್ರಧಾನಿ ಅವರು ರಾಜ್ಯಕ್ಕೆ ನೆರವು ನೀಡುವ ಬಗ್ಗೆ ಮಾತನಾಡಲಿಲ್ಲ. ಹೋಗಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ನೀಡುವ ಬಗ್ಗೆಯೂ ಮಾತನಾಡಲಿಲ್ಲ. ಹಾಗಾಗಿ ಇದೊಂದು ರಾಜಕೀಯ ಜಾತ್ರೆ ಎಂದರು.
ದೇವಿಯ ಉಪಾಸನೆಯೇ ನಮ್ಮ ಗುರಿ, ನಾರಿಯೆ ನಮ್ಮ ಶಕ್ತಿ ಎಂದು ಹೇಳುವ ಬಿಜೆಪಿಗರು ಶೋಭಾ ಕರಂದ್ಲಾಜೆಯ ಅವಹೇಳನ ಮಾಡಿದರೂ ಸುಮ್ಮನಿದ್ದಾರೆ. ಇದು ಕೇವಲ ರಾಜಕೀಯ ಪ್ರಭಾವವಾಗಿ ಕಾಣಿಸಿಕೊಂಡಿದೆ. ನಾನೇ ಆಗಿದ್ದರೆ ಖಂಡಿತ ಬಿ.ಎಸ್. ಯಡಿಯೂರಪ್ಪನವರ ರಕ್ಷಣೆಗೆ ಹೋಗುತ್ತಿದ್ದೆ. ಆದರೆ, ಅವರ ಮಕ್ಕಳು ಚಾರಿತ್ರ್ಯವಧೆ ಆದರೂ ಸುಮ್ಮನಿದ್ದಾರೆ. ತಂದೆಯ ಉತ್ತರಾಧಿಕಾರಬೇಕು, ಆಸ್ತಿ ಬೇಕು, ಅವಮಾನ ಮಾಡಿದರೆ ತಿರುಗಿ ಮಾತನಾಡುವ ಶಕ್ತಿ ಅವರು ಕಳೆದುಕೊಂಡಿದ್ದಾರೆ ಎಂದು ಚಾಟಿ ಬೀಸಿದರು.ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಧೀರರಾಜ್ ಹೊನ್ನವಿಲೆ ಮತ್ತತರರು ಇದ್ದರು.
- - -ಬಾಕ್ಸ್
ಭೀಷ್ಮನ ಸ್ಥಿತಿಯಲ್ಲಿ ಬಿಎಸ್ವೈಬಿ.ಎಸ್.ಯಡಿಯೂರಪ್ಪ ಅವರು ಈಗ ರಾಜಕೀಯ ಅನಾಥರಾಗಿದ್ದಾರೆ. ಅವರನ್ನು ಬಿಜೆಪಿಯ ವರಿಷ್ಠರು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಆಯನೂರು ಮಂಜುನಾಥ್ ಟೀಕಿಸಿದರು. ಒಂದು ರೀತಿಯಲ್ಲಿ ಮಹಾಭಾರತ ಕಥೆಯ ಭೀಷ್ಮರು ಶರಪಂಜರದಲ್ಲಿ ಅಸಹಾಯಕರಾಗಿ ಮಲಗಿದಂತೆ ಇದ್ದಾರೆ. ಅವರನ್ನು ರಕ್ಷಣೆ ಮಾಡಲು ಈಗ ಯಾರು ಇಲ್ಲ. ಅದು ಅವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ನಾನು ಅವರ ಪ್ರೀತಿಯ ಶಿಷ್ಯನಾಗಿ ನೊಂದು ಮಾತನಾಡುತ್ತಿದ್ದೇನೆ ಎಂದ ಆಯನೂರು, ಈಶ್ವರಪ್ಪನವರ ಹರಿದ ಬಾಯನ್ನು ಹೊಲೆಯಲು ಈಗ ಬಿಜೆಪಿಯಲ್ಲಿ ಯಾರು ಇಲ್ಲ ಎಂದು ಹರಿಹಾಯ್ದರು.
- - -- 19ಎಸ್‌ಎಂಜಿಕೆಪಿ02: ಆಯನೂರು ಮಂಜುನಾಥ್