ಈಶ್ವರಪ್ಪರದೇ ಒರಿಜಿನಲ್ ಬಿಜೆಪಿ: ಮಹೇಶ್‌

KannadaprabhaNewsNetwork |  
Published : Apr 09, 2024, 12:45 AM IST
ಫೋಟೋ 08 ಟಿಟಿಎಚ್ 01 ಕೆ.ಎಸ್ ಈಶ್ವರಪ್ಪನವರನ್ನು ಬೆಂಬಲಿಸಿ ಸೋಮವಾರ ಪಟ್ಟಣದ ಶುಕ್ರವಾರ ಪಟ್ಟಣದ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿ. | Kannada Prabha

ಸಾರಾಂಶ

ಬಿಜೆಪಿ ಮೈಸೂರಿನಲ್ಲಿ ಪ್ರತಾಪಸಿಂಹರನ್ನು ಬಿಟ್ಟು ಮಹಾರಾಜರಿಗೆ ಮಣೆ ಹಾಕುವ ಅಗತ್ಯವೇ ಇರಲಿಲ್ಲ

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಬಿಜೆಪಿ ಪಕ್ಷದಿಂದ ಟಿಕೆಟ್ ಹಂಚಿಕೆಯಲ್ಲಿ ಹಿಂದುತ್ವ ಮತ್ತು ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿರುವ ಹಿನ್ನೆಲೆ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ಧ ರಾಷ್ಟ್ರಭಕ್ತ ಬಳಗದ ಹೆಸರಿನಲ್ಲಿ ಸಂಘಟನೆ ಹುಟ್ಟುಹಾಕಲಾಗಿದೆ ಎಂದು ಜಿಲ್ಲಾ ಬಿಜೆಪಿ ಒಬಿಸಿ ವರ್ಗದ ಮಾಜಿ ಅಧ್ಯಕ್ಷ ಮೇಲಿನಕೊಪ್ಪ ಮಹೇಶ್ ಹೇಳಿದರು.

ಸೋಮವಾರ ಪಟ್ಟಣದ ಹೋಟೆಲೊಂದರಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಮಗನಿಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪನವರು ಬಂಡಾಯ ಅಭ್ಯರ್ಥಿಯಾಗಿಲ್ಲ. ಕಾಂತೇಶಗೆ ಹಾವೇರಿಯಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಕೊನೆಗೆ ಕೊರಳು ಕೊಯ್ದಿದ್ದಾರೆ ಎಂದು ಆರೋಪಿಸಿದರು.

ಹಿಂದುತ್ವ ಮತ್ತು ಹಿಂದುಳಿದವರ ಹಿತಕ್ಕಾಗಿ ಕೆ.ಎಸ್.ಈಶ್ವರಪ್ಪನವರ ನಾಯಕತ್ವದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಸ್ಥಾಪನೆಯಾಗಿರುವ ನಮ್ಮದೇ ಒರಿಜಿನಲ್ ಬಿಜೆಪಿ. ಈಗಲೂ ಕಾಲ ಮಿಂಚಿಲ್ಲ, ಬಿ.ವೈ.ರಾಘವೇಂದ್ರ ನಿವೃತ್ತಿಯಾಗಿ ಈಶ್ವರಪ್ಪನವರಿಗೆ ಅವಕಾಶ ಮಾಡಿಕೊಟ್ಟು ಬಿ.ವೈ,ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಎಲ್ಲವೂ ಸರಿಹೋಗುತ್ತದೆ ಎಂದೂ ಆಗ್ರಹಿಸಿದರು.

ನರೇಂದ್ರ ಮೋದಿ ಕೇವಲ ಭಾರತಕ್ಕೆ ಮಾತ್ರ ನಾಯಕರಲ್ಲ, ಅವರೊಬ್ಬ ವಿಶ್ವ ನಾಯಕ. ಆದರೆ, ಬಿಜೆಪಿ ಪಕ್ಷದಲ್ಲಿ ಈ ಬಾರಿ ಚುನಾವಣೆಯಲ್ಲಿ ರಾಷ್ಟ್ರೀಯತೆ ಮತ್ತು ಹಿಂದುತ್ವದ ಸಿದ್ಧಾಂತ ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಿಜೆಪಿ ಕಾಂಗ್ರೆಸ್ ಪಕ್ಷದ ನೆರಳಿನಂತಾಗಿದೆ ಎಂದು ಟೀಕಿಸಿದರು.

ಹಿಂದುತ್ವವಾದಿಗಳಾದ ಸಿ.ಟಿ.ರವಿ, ಕಟೀಲು ಮತ್ತು ಹಿಂದುತ್ವದ ಫೈರ್ ಬ್ರಾಂಡ್ ಆಗಿರುವ ಅನಂತಕುಮಾರರನ್ನು ಕಡೆಗಣಿಸಿರುವ ಬಿಜೆಪಿ ಮೈಸೂರಿನಲ್ಲಿ ಪ್ರತಾಪಸಿಂಹರನ್ನು ಬಿಟ್ಟು ಮಹಾರಾಜರಿಗೆ ಮಣೆ ಹಾಕುವ ಅಗತ್ಯವೇ ಇರಲಿಲ್ಲ. ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮ ಮಕ್ಕಳಿಗೆ ಆದ್ಯತೆ ನೀಡಿರುವುದು ಮಾತ್ರವಲ್ಲ. ಕಾರ್ಯಕರ್ತರಿಂದ ಗೋ ಬ್ಯಾಕ್ ಎಂದು ಕಡೆಗಣಿಸಿದ್ದ ಶೋಭಾ ಕರಂದ್ಲಾಜೆಯವರಿಗೆ ಬೆಂಗಳೂರಿನಲ್ಲಿ ಟಿಕೆಟ್ ಕೊಡಿಸಿಲ್ಲವೇ ಎಂದೂ ಪತ್ರಕರ್ತರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.

ಹಿಂದುತ್ವದ ಬಗ್ಗೆ ಭಾಷಣ ಮಾಡುವ ಸಂಸದರು ಕಾಮಗಾರಿಗಳಿಗೆ ಗುತ್ತಿಗೆ ನೀಡುವ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇತರೆಯವರನ್ನೇ ಅವಲಂಬಿಸುತ್ತಾರೆ. ಯಡಿಯೂರಪ್ಪನವರ ಕುಟುಂಬದ ರಾಜಕಾರಣ ಬಯಲು ಪಡಿಸುವುದೇ ಉದ್ದೇಶವಾಗಿದೆ ಎಂದರು.

ಹಿಂದೂ ಸಂಘಟನೆ ಮದನ್ ಗೋರ್ಕುಡೆ, ಕವಲೇದುರ್ಗ ಗ್ರಾಪಂ ಸದಸ್ಯ ರಾಘವೇಂದ್ರ, ಶಶಿಕುಂದರ್, ಪ್ರದೀಪ್ ಕೋಡೂರು, ಸಚಿನ್ ಗೌಡ ಗರ್ತಿಕೆರೆ ಸೇರಿ ಸುಮಾರು 25 ರಿಂದ 30 ಮಂದಿ ಯುವಕರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ