ಬಿಜೆಪಿಗೆ ಸೆಡ್ಡು ಹೊಡೆದ ರಘುಪತಿ ಭಟ್ಟರಿಗೆ ಈಶ್ವರಪ್ಪ ಬೆಂಬಲ

KannadaprabhaNewsNetwork |  
Published : May 21, 2024, 12:35 AM IST
ಈಶ್ವರಪ್ಪ20 | Kannada Prabha

ಸಾರಾಂಶ

ರಘುಪತಿ ಭಟ್ ನಾಮಪತ್ರ ಹಿಂತೆಗೆದುಕೊಳ್ಳದೇ ಬಿಜೆಪಿಗೆ ಸೆಡ್ಡು ಹೊಡೆದು ಕಣದಲ್ಲಿ ಉಳಿದುಕೊಂಡು, ಬಿಜೆಪಿಗೆ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಮನವೊಲಿಸುವುದಕ್ಕೆ ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಅವರು ಬಗ್ಗಲಿಲ್ಲ.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಲೋಸಕಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳುವ ದಿನವಾಗಿದ್ದು, ರಘುಪತಿ ಭಟ್ ನಾಮಪತ್ರ ಹಿಂತೆಗೆದುಕೊಳ್ಳದೇ ಬಿಜೆಪಿಗೆ ಸೆಡ್ಡು ಹೊಡೆದು ಕಣದಲ್ಲಿ ಉಳಿದುಕೊಂಡು, ಬಿಜೆಪಿಗೆ ನುಂಗಲಾರದ ತುತ್ತಾಗಿದ್ದಾರೆ.

ಅವರನ್ನು ಮನವೊಲಿಸುವುದಕ್ಕೆ ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಅವರಿಗೆ ಮುಂದೆ ಬೇರೆ ಅವಕಾಶಗಳನ್ನು ನೀಡುವ ಭರವಸೆಯನ್ನು ನೀಡಿದ್ದರು. ಆದರೆ ವಿಧಾನ ಪರಿಷತ್ ಟಿಕೆಟ್ ನೀಡದೇ ಮಾತು ತಪ್ಪಿದ ವರಿಷ್ಟರ ಮೇಲೆ ಮುನಿಸಿಕೊಂಡಿರುವ ಭಟ್, ಯಾವುದೇ ಭರವಸೆಗಳಿಗೆ ಮನವೊಲಿಯದೇ, ಕ್ಷೇತ್ರದ ಐದೂ ಜಿಲ್ಲೆಗಳಿಗೆ ತೆರಳಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದಾರೆ.

ಸೋಮವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರನ್ನು, ಪದವೀಧರ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಮತಯಾಚನೆ ನಡೆಸಲಿದ್ದಾರೆ.

* ಈಶ್ವರಪ್ಪರಿಂದ ಬೆಂಬಲ

ಈ ನಡುವೆ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರು ರಘುಪತಿ ಭಟ್ ಅವರ ಪದವೀಧರರ ಸಂಪರ್ಕ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ, ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೊಯ್ಸಳ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ. ಶಂಕರ್, ಸದಸ್ಯರಾದ ಸೋಗಣ್ಣ ರಮೇಶ್, ಶಿವಮೊಗ್ಗ ನಗರಪಾಲಿಕೆ ಮಾಜಿ ಸದಸ್ಯ ವಿಶ್ವಾಸ್, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ಸ್ಥಳೀಯ ಹಿರಿಯರಾದ ದೇವದಾಸ್ ನಾಯಕ್, ತಾಲೂಕು ವಿಶ್ವಕರ್ಮ ಸಮಾಜದ ಪ್ರಮುಖ ಅ.ಮಾ. ಪ್ರಕಾಶ್, ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ವೆಂಕಟೇಶ್ ರಾವ್ ಹಾಗೂ ಇತರ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ