ಈಶ್ವರೀಯ ವಿಶ್ವವಿದ್ಯಾಲಯ: ಜನರನ್ನು ಆಕರ್ಷಿಸಿದ ಅಮರನಾಥ ಶಿವಲಿಂಗ

KannadaprabhaNewsNetwork |  
Published : Feb 27, 2025, 12:30 AM IST
೨೬ಕೆಎಂಎನ್‌ಡಿ-೭ಅಮರನಾಥ ಶಿವಲಿಂಗ | Kannada Prabha

ಸಾರಾಂಶ

ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬಕ್ಕೆ ಏನಾದರೊಂದು ವೈಶಿಷ್ಟ್ಯತೆಯನ್ನು ಮಂಡ್ಯ ಜನರಿಗೆ ಪರಿಚಯಿಸುವುದನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ಅಮರನಾಥ ಶಿವಲಿಂಗ, ಹನ್ನೆರಡು ಜ್ಯೋತಿರ್‌ ಲಿಂಗ, ಸಹಸ್ರ ಶಿವಲಿಂಗ, ಚೈತನ್ಯದೇವಿಯರು, ಮಾತನಾಡುವ ಕುಂಭಕರ್ಣ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬಕ್ಕೆ ಏನಾದರೊಂದು ವೈಶಿಷ್ಟ್ಯತೆಯನ್ನು ಮಂಡ್ಯ ಜನರಿಗೆ ಪರಿಚಯಿಸುವುದನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ಅಮರನಾಥ ಶಿವಲಿಂಗ, ಹನ್ನೆರಡು ಜ್ಯೋತಿರ್‌ ಲಿಂಗ, ಸಹಸ್ರ ಶಿವಲಿಂಗ, ಚೈತನ್ಯದೇವಿಯರು, ಮಾತನಾಡುವ ಕುಂಭಕರ್ಣ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಈ ವಿಶೇಷತೆಗಳನ್ನು ತೆರೆದಿಡಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಒಳ ಪ್ರವೇಶಿಸುತ್ತಿದ್ದಂತೆ ದೈವಭಕ್ತಿ ಮೂಡುವಂತೆ ಅಚ್ಚುಕಟ್ಟಾಗಿ ಪ್ರದರ್ಶವನ್ನು ಆಯೋಜಿಸಲಾಗಿದೆ. ಅಮರನಾಥ ಶಿವಲಿಂಗ ಮಾದರಿಯಲ್ಲೇ ಶಿವಲಿಂಗದ ಕಲಾಕೃತಿಯನ್ನು ಸೃಷ್ಟಿಸಲಾಗಿದ್ದು, ಗುಹೆಯೊಳಗೆ ಹಿಮಲಿಂಗ ಸೃಷ್ಟಿಸಿ ಪಕ್ಕದಲ್ಲಿ ತ್ರಿಶೂಲವನ್ನು ಇಡಲಾಗಿದೆ. ನೋಡುತ್ತಿದ್ದಂತೆ ಭಕ್ತಿ ಮೂಡುವಷ್ಟರಮಟ್ಟಿಗೆ ವಿನ್ಯಾಸಗೊಳಿಸಲಾಗಿದೆ. ಈಶ್ವರ, ಪಾರ್ವತಿ ಮತ್ತು ನಂದಿ ಇರುವ ಕಲಾಕೃತಿ ಕೂಡ ವಿದ್ಯುತ್‌ದೀಪದ ಬೆಳಕಿನಲ್ಲಿ ಆಕರ್ಷಣೀಯವಾಗಿ ಕಾಣಿಸುತ್ತಿದೆ.

ಆರು ಮಂದಿ ಯುವತಿಯರಿಗೆ ಚೈತನ್ಯದೇವಿಯರ ವೇಷ ತೊಡಿಸಿ ಕ್ರಮವಾಗಿ ಆಸನಗಳಲ್ಲಿ ಕೂರಿಸಲಾಗಿದೆ. ಅವರಿಗೆ ತೊಡಿಸಿರುವ ವಸ್ತಾಲಂಕಾರ ಕೂಡ ಬಹಳ ಉತ್ತಮವಾಗಿದ್ದು ಜನರ ಮೆಚ್ಚುಗೆ ಗಳಿಸಿದೆ. ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿರುವ ಮಂಟಪ ಅತ್ಯಾಕರ್ಷಕವಾಗಿದ್ದು ಒಳಗಿನ ದೀಪಾಲಂಕಾರ ಕೂಡ ಎಲ್ಲರನ್ನೂ ಸೆಳೆಯುತ್ತಿದೆ.

ಮುಖ್ಯ ಆಕರ್ಷಣೆಯಾಗಿ ೨೧ ಅಡಿ ಉದ್ದದ ಮಾತನಾಡುವ ಕುಂಭಕರ್ಣನಿಗೆ ಪರಮಾತ್ಮನ ಅವತರಣೆಯ ಬಗ್ಗೆ ಸಂದೇಶಶ ನೀಡಿ ಅವನನ್ನು ಜಾಗೃತಗೊಳಿಸುವ ಮತ್ತು ಜಾಗೃತಗೊಂಡ ಕುಂಭಕರ್ಣನ ಸಂದೇಶವನ್ನು ಕೇಳುವ ವಿಶೇಷ ಅವಕಾಶವನ್ನು ನಗರದ ಜನರಿಗೆ ಒದಗಿಸಿಕೊಡಲಾಗಿದೆ. ಜೊತೆಗೆ ಸಹಸ್ರಲಿಂಗ ದರ್ಶನ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಒಂದೇ ಸ್ಥಳದಲ್ಲಿ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ವೈದ್ಯನಾಥೇಶ್ವರ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರ, ವಿಶ್ವೇಶ್ವರ, ತ್ರಯಂಬಕೇಶ್ವರ, ಕೇದಾರನಾಥ, ಗೃಷ್ಣೇಶ್ವರ ಎಂಬ ಹನ್ನೆರಡು ಜ್ಯೋತಿರ್‌ಲಿಂಗಗಳನ್ನು ಪ್ರತಿಷ್ಠಾಪಿಸಿರುವುದು ವಿಶೇಷತೆಗೆ ಇನ್ನಷ್ಟು ಮೆರುಗು ನೀಡಿದೆ.

ಈ ಪ್ರದರ್ಶನವು ಫೆ.೨೩ರಿಂದ ಮಾ.೨ರವರೆಗೆ ಪ್ರತಿದಿನ ಬೆಳಗ್ಗೆ ೯ ರಿಂದ ರಾತ್ರಿ ೯ರವರೆಗೆ ಆಯೋಜಿಸಲಾಗಿದೆ. ನಿತ್ಯ ಸಂಜೆ ೬.೩೦ರಿಂದ ೮.೩೦ರವರೆಗೆ ಗಾಯನ, ನೃತ್ಯ ಆಧ್ಯಾತ್ಮ ಪ್ರವಚನ ಕಾರ್ಯಕ್ರಮಗಳು ಜರುಗಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ