ಹುಬ್ಬಳ್ಳಿ: ಬಾಕಿ ವೇತನ ಮತ್ತು ಪರಿಷ್ಕೃತ ವೇತನ ಜಾರಿಗೆ ಒತ್ತಾಯಿಸಿ ಆಗಸ್ಟ್ 5 ರಂದು ಸಾರಿಗೆ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟ ಮುಷ್ಕರಕ್ಕೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಬೆಂಬಲ ನೀಡಲಿದ್ದು, ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರ ಜತೆ ಸೌಹಾರ್ದಯುತ ಮಾತುಕತೆಗೆ ಸಿದ್ಧವಿದೆ ಎಂದು ಮಹಾಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಸ್ಪಷ್ಪಪಡಿಸಿದ್ದಾರೆ.
ನಗರದ ಶರ್ಮಾ ಭವನದಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಸೇರಿದ್ದ ಮಹಾಮಂಡಳದ ನಾನಾ ಜಿಲ್ಲೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರವು ಸಂಘಟನೆ ಜತೆ ಮಾತುಕತೆ ನಡೆಸಿ ನೌಕರರ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಷ್ಕರದಿಂದ ಆಗುವ ಎಲ್ಲ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.ಜು. 4ರಂದು ಸಂಘಟನೆ ಜತೆ ನಡೆದ ಸಭೆಯಲ್ಲಿ ಸರ್ಕಾರ, 38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲು ಬರುವುದಿಲ್ಲ ಎಂದು ಯು ಟರ್ನ್ ಹೊಡೆದಿದೆ. 1958ರಿಂದ ಇಲ್ಲಿಯ ವರೆಗೆ 18 ಬಾರಿ ವೇತನ ಪರಿಷ್ಕರಣೆಯಾಗಿದ್ದು, ಪ್ರತಿ ಸಲವೂ ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಬಾಕಿ ವೇತನ ಪಾವತಿ ಬಗ್ಗೆ ವಿಮರ್ಶೆ ಮಾಡಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಏಕ ಸದಸ್ಯ ಸಮಿತಿ ವರದಿ ಸಲ್ಲಿಸಿದೆ. ವೇತನ ಬಾಕಿಗೆ ಅರ್ಹವಿಲ್ಲವೆಂದರೆ ಈ ವಿಷಯವನ್ನು ನಿರ್ಧರಿಸಲು ಏಕ ಸದಸ್ಯ ಸಮಿತಿಗೆ ಏಕೆ ಸೂಚನೆ ನೀಡಬೇಕಿತ್ತು ಎಂದು ಪ್ರಶ್ನಿಸಿದರು.
ಎಸ್ಮಾ ಜಾರಿಗೆ ಖಂಡನೆ: ಆಗಸ್ಟ್ 5ರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಮಾ ಕಾಯಿದೆ ಜಾರಿಗೊಳಿಸಿರುವುದನ್ನು ಮಹಾಮಂಡಳಿ ಉಗ್ರವಾಗಿ ಖಂಡಿಸುತ್ತದೆ. ಎಸ್ಮಾಕ್ಕೆ ಜಗ್ಗದೇ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಿ. ಜಯದೇವ ಅರಸ, ಖಜಾಂಚಿ ಎನ್.ಆರ್. ದೇವರಾಜ ಅರಸ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.