ನಗರದ ಎಸ್ಎಫ್ಐ ಕಚೇರಿಯಲ್ಲಿ ಸಮಾನ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ನ 16ನೇ ಜಿಲ್ಲಾ ಸಮ್ಮೇಳನ ನಡೆಯಿತು.
ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಕಾರವಾರದ ಸ್ನಾತಕೋತ್ತರ ಪದವಿ ಕೇಂದ್ರವನ್ನು ಉಳಿಸಬೇಕು ಹಾಗೂ ವಿದ್ಯಾರ್ಥಿನಿಲಯಗಳಿಗೆ ಸರ್ಕಾರಿ ಕಟ್ಟಡ ನಿರ್ಮಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಒತ್ತಾಯಿಸಿದರು.ನಗರದ ಎಸ್ಎಫ್ಐ ಕಚೇರಿಯಲ್ಲಿ ಸಮಾನ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ನ 16ನೇ ಜಿಲ್ಲಾ ಸಮ್ಮೇಳನ ನಡೆಯಿತು.ಸಮ್ಮೇಳನಕ್ಕೂ ಮುನ್ನ ಜಿಲ್ಲಾ ಸಂಚಾಲಕ ಗಣೇಶ ರಾಠೋಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿ ಚಳವಳಿಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಅವರು ತಮಟೆ ಬಾರಿಸುವ ಮೂಲಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್., ಶಿಕ್ಷಣವು ಸರ್ಕಾರ ಜನರಿಗೆ ಒದಗಿಸಬೇಕಾದ ಸೇವೆಯಾಗಬೇಕೇ ಹೊರತು ಮಾರಾಟದ ವಸ್ತುವಾಗಬಾರದು. ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಸಂಘಟನೆ ಹೋರಾಟ ರೂಪಿಸಬೇಕಿದೆ. ‘ಒಂದು ದೇಶ, ಒಂದು ಚುನಾವಣೆ’ ಎಂದು ಹೇಳುವವರು ‘ಒಂದು ದೇಶ, ಒಂದು ಶಿಕ್ಷಣ ನೀತಿ’ ಹಾಗೂ ಸಮಾನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.ಕಾರವಾರದ ಸ್ನಾತಕೋತ್ತರ ಪದವಿ ಕೇಂದ್ರವನ್ನು ಉಳಿಸುವುದು, ವಿದ್ಯಾರ್ಥಿನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು. ಕೆಪಿಆರ್ಎಸ್ ತಾಲೂಕು ಅಧ್ಯಕ್ಷೆ ಮೋಹಿನಿ ನಮ್ಸೇಕರ್ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಸಮ್ಮೇಳನಕ್ಕೆ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಗಣೇಶ ರಾಠೋಡ, ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿ ಚಳವಳಿಯನ್ನು ಕಟ್ಟಲು ಪ್ರಯತ್ನಿಸಲಾಗಿದ್ದು, ಅದನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಸಮ್ಮೇಳನದಲ್ಲಿ ಆಯ್ಕೆಯಾಗುವ ನೂತನ ಸಮಿತಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವಿದೆ ಎಂದರು.ವೀರೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಕಪ್ಪ ನಿರೂಪಿಸಿದರು. ಶಶಿಕುಮಾರ್ ಸ್ವಾಗತಿಸಿದರು. ಕೀರ್ತನಾ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.